ಕಾಂಗ್ರೆಸ್‌ನಿಂದ ಕೋಮು ಪ್ರಚೋದನೆ; ಆಯೋಗಕ್ಕೆ ದೂರು

ಬೆಂಗಳೂರು, ಮೇ 3: ಕಾಂಗ್ರೆಸ್ ಪಕ್ಷ ಧರ್ಮ ಒಡೆದು ಆಳುವ ನೀತಿ ಅನುಸರಿಸಿ ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದೆಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬೀತ್ ಪಾತ್ರ ತಿಳಿಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರಂನ ಬಿಜೆಪಿ ಮಾಧ್ಯಮ ಕೇಂದ್ರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮರಾಜ ಪೇಟೆ ಕಾಂಗ್ರೆಸ್ ಅಭ್ಯರ್ಥಿ ಝಮೀರ್ ಅಹ್ಮದ್ ಖಾನ್ ಮುಸ್ಲಿಮ್ ಸಮುದಾಯದ ಮುಖಂಡರನ್ನು ಸಭೆ ಕರೆದು ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ, ಮಂಗಳವಾರ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂಬ ಹೇಳಿಕೆ ನೀಡಿ ಒಡೆದಾಳುವ ನೀತಿ ಅನುಸರಿಸಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.
ಕಾಂಗ್ರೆಸ್‌ಗೆ ಮಾಹಿತಿ ನೀಡುತ್ತಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಮುಚ್ಚಿದೆ. ಇದರಿಂದ ಕಾಂಗ್ರೆಸ್‌ಗೆ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ದೇಶದ ಜನರ ಮೇಲೆ ವಿಶ್ವಾಸವಿಲ್ಲದ ರಾಹುಲ್ ಗಾಂಧಿ ಸುಳ್ಳು ಹೇಳುತ್ತಾ ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ದೂರಿದರು.
ಉಡುಪಿ ದೇವಸ್ಥಾನದ ಮೇಲೆ ಸಾವಿರಾರು ವರ್ಷಗಳಿಂದ ಭಗವಾಧ್ವಜಗಳನ್ನು ಹಾರಿಸಲಾಗುತ್ತದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಸಹ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಫ್ರಾನ್ಸಿಸ್, ಧ್ವಜಗಳನ್ನು ತೆರವುಗೊಳಿಸಲು ಆದೇಶಿಸಿದ್ದಾರೆ. ಅಲ್ಲದೆ, ಕರಾವಳಿ ಸಂಪ್ರದಾಯ, ಸಂಸ್ಕೃತಿಗೆ ನಿರ್ಬಂಧ ಹೇರಲು ಹೊರಟಿದ್ದಾರೆ. ಹೀಗಾಗಿ, ಜಿಲ್ಲಾಧಿಕಾರಿಯ ವಿರುದ್ದವೂ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದೆಂದು ಅವರು ಹೇಳಿದರು.
ಕಾಂಗ್ರೆಸ್ ಸರಕಾರವೇ ಹೊಣೆ: ರಾಜ್ಯದ ವಕ್ಫ್‌ಬೋರ್ಡ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಒಳಗೊಂಡಂತೆ, ಬರೋಬ್ಬರಿ 2 ಲಕ್ಷ ಕೋಟಿಗೂ ಹೆಚ್ಚು ಲೂಟಿ ಮಾಡಿದ್ದಾರೆ. ಇದಕ್ಕೆಲ್ಲಾ, ರಾಜ್ಯದ ಸಿದ್ದರಾಮಯ್ಯ ಸರಕಾರವೇ ನೇರ ಹೊಣೆ ಎಂದು ಸಂಬೀತ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ವಕ್ತಾರ ಅಶ್ವತ್ ನಾರಾಯಣ್ ಸೇರಿ ಪ್ರಮುಖರಿದ್ದರು.







