ಐಪಿಎಲ್:ಚೆನ್ನೈ ವಿರುದ್ಧ ಕೆಕೆಆರ್ ಗೆಲುವಿನ ಕೇಕೆ

ಕೋಲ್ಕತಾ, ಮೇ 3: ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ 6 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.
ಗುರುವಾರ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಕೋಲ್ಕತಾ ತಂಡ 17.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
ಶುಭಂ ಗಿಲ್(ಔಟಾಗದೆ 57,36 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ದಿನೇಶ್ ಕಾರ್ತಿಕ್ (ಔಟಾಗದೆ 45,18 ಎಸೆತ, 7 ಬೌಂಡರಿ, 1 ಸಿಕ್ಸರ್) 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 83 ರನ್ ಸೇರಿಸಿ ಇನ್ನೂ 14 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಆಟಗಾರ ಸುನೀಲ್ ನರೇನ್(32) ಹಾಗೂ ಆರ್‌ಕೆ ಸಿಂಗ್ 16 ರನ್ ಕೊಡುಗೆ ನೀಡಿದರು.
ಇದಕ್ಕೆ ಮೊದಲು ಚೆನ್ನೈ ಪರ ಇನಿಂಗ್ಸ್ ಆರಂಭಿಸಿದ ವಾಟ್ಸನ್(36) ಹಾಗೂ ಎಫ್‌ಡು ಪ್ಲೆಸಿಸ್(27) 5.1 ಓವರ್‌ಗಳಲ್ಲಿ 48 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಔಟಾಗದೆ 43(25 ಎಸೆತ, 1 ಬೌಂಡರಿ, 4 ಸಿಕ್ಸರ್)ರನ್ ಗಳಿಸಿದ ನಾಯಕ ಎಂಎಸ್ ಧೋನಿ ತಂಡದ ಮೊತ್ತವನ್ನು 177ಕ್ಕೆ ತಲುಪಿಸಿದರು.
ಸುರೇಶ್ ರೈನಾ(31), ಅಂಬಟಿ ರಾಯುಡು(21) ಹಾಗೂ ರವೀಂದ್ರ ಜಡೇಜ(12) ಎರಡಂಕೆಯ ಸ್ಕೋರ್ ದಾಖಲಿಸಿದರು.
ಕೆಕೆಆರ್ ಪರ ಪಿಯೂಷ್ ಚಾವ್ಲಾ(2-35) ಹಾಗೂ ಸುನೀಲ್ ನರೇನ್(2-20) ತಲಾ ಎರಡು ವಿಕೆಟ್ ಕಬಳಿಸಿದ್ದಾರೆ.







