ರಾಜ್ಯಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಸಿದ್ದರಾಮಯ್ಯ

ಬೆಂಗಳೂರು, ಮೇ 4: ರಾಜ್ಯಕ್ಕೆ ಬಿಜೆಪಿ ಸರಕಾರದ ಕೊಡುಗೆ ಶೂನ್ಯವೆಂದು ಮತದಾರರ ಅರಿವಿಗೆ ಬಂದಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮಾತೆ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಧಾನಸಭಾ ಚುನಾವಣೆ ಕುರಿತು 'ಕರ್ನಾಟಕ ನೌ: ಸೀಝ್ ದ ಮೂಮೆಂಟ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ಮೋದಿ ಕರ್ನಾಟಕದ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯವು ಎರಡು ಬಾರಿ ಭೀಕರ ಬರಗಾಲಕ್ಕೆ ತುತ್ತಾದರೂ ಪ್ರಧಾನಿ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಮಹಾದಾಯಿ ನೀರು ಹಂಚಿಕೆ ವಿವಾದದ ಪರಿಹಾರಕ್ಕೆ ಮುಂದಾಗದೆ ಪ್ರಧಾನಿ ಮೋದಿ ನಿರ್ಲಕ್ಷ ವಹಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡದೆ, ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವ ಮೂಲಕ ಬಿಜೆಪಿ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಗೆಲ್ಲಲಿದ್ದು, ಸ್ವತಂತ್ರ ಸರಕಾರ ರಚಿಸುವುದರಲ್ಲಿ ಯಾವುದೆ ಅನುಮಾನವಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಬಾಯ್ತುಂಬ ಹೊಗಳಿರುವ ಬಗ್ಗೆ ತಮಗೆ ಯಾವುದೇ ಆತಂಕವಿಲ್ಲ. ಇದು ಮತದಾರರಲ್ಲಿ ಒಡಕು ಹುಟ್ಟಿಸುವ ಬಿಜೆಪಿಯ ರಾಜಕೀಯ ತಂತ್ರವಷ್ಟೆ ಎಂದು ಅವರು ಹೇಳಿದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ಅಪರಾಧ ಕೃತ್ಯಗಳಲ್ಲಿ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಾಸ್ತಾನಗಳು ಪ್ರಥಮ ಸ್ಥಾನಗಳನ್ನು ಪಡೆದಿವೆ. ಬಿಜೆಪಿ ನಾಯಕರು ಮೊದಲು ತಮ್ಮ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಿ. ನಂತರ ಕರ್ನಾಟಕ ಕುರಿತು ಮಾತನಾಡಲಿ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ಶಾರವರು ಚುನಾವಣೆಗೂ ಮುನ್ನವೆ ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿಯೆಂದು ಘೋಷಿಸುತ್ತಿದ್ದಾರೆ. ಆ ಮೂಲಕ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದವರಿಗೆ ಬಿಜೆಪಿ ನೀಡುತ್ತಿರುವ ಸ್ಥಾನಮಾನಗಳನ್ನು ರಾಜ್ಯದ ಜನತೆ ಸಹಿಸುವುದಿಲ್ಲ. ಹೀಗಾಗಿ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸೋಲುವುದು ಖಚಿತವೆಂದು ಅವರು ಹೇಳಿದರು.
ಉದ್ಯಮಿ ಕಿರಣ್ ಮಜುಂದಾರ್ ಶಾ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ನೀಡಿದೆ, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಮೆಟ್ರೋ ಹಾಗೂ ಟೆಂಡರ್ ಶ್ಯೂರ್ ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿದೆ. ಇದರಿಂದ ಮುಂಬರುವ ಸರಕಾರಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.







