ಬೈಂದೂರು ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿಗೆ ದುಬೈಯಿಂದ ಬೆದರಿಕೆ ಕರೆ

ಉಡುಪಿ, ಮೇ 4: ಬೈಂದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ದುಬೈಯಿಂದ ಮೊಬೈಲ್ ಕರೆ ಮಾಡಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೆದರಿಕೆಯೊಡ್ಡಿರುವುದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಶೆಟ್ಟಿ, ಮೇ 3ರಂದು ಸಂಜೆ ವೇಳೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತ ನೋರ್ವ ಅಂತಾರಾಷ್ಟ್ರೀಯ ಕರೆ ಮಾಡಿ, ಚುನಾವಣಾ ಕಣದಿಂದ ಹಿಂದೆ ಸರಿಯಬೇಕು, ಇಲ್ಲದಿದ್ದರೆ ರಾತ್ರಿಯೊಳಗೆ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡ ಲಾಗಿದೆ. ಇದಕ್ಕೆ ಸ್ಪಂದಿಸಿದ ಪೊಲೀಸ್ ಇಲಾಖೆ ನನ್ನ ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದರು.
ಎ.17ರಂದು ನನ್ನ ಮೊಬೈಲ್‌ಗೆ ಸ್ಥಳೀಯರೊಬ್ಬರು ಕರೆ ಮಾಡಿ, ಹಣ ಕೊಟ್ಟರೆ ನಿಮ್ಮ ಪರ ಪ್ರಚಾರಕ್ಕೆ ಬರುತ್ತೇವೆ ಎಂದು ಹೇಳಿದರು. ಹಣ ಇಲ್ಲ ಹೇಳಿದಕ್ಕೆ ಬಿಜೆಪಿಗೆ ಬನ್ನಿ ನಾವು ಹಣ ಕೊಡುತ್ತೇವೆ ಎಂದು ಹೇಳಿದ್ದರು. ಈ ನಂಬರ್‌ನ್ನು ಕೂಡ ಪೊಲೀಸರಿಗೆ ನೀಡಲಾಗಿದೆ. ಈ ಕರೆ ಬಂದ ಎರಡು ದಿನಗಳ ನಂತರ ನನ್ನ ಮನೆಯ ಮುಂದೆ ವಾಮಚಾರ ಮಾಡಲಾಗಿತ್ತು. ಈ ಬಗ್ಗೆ ಇಂದು ಬೈಂದೂರು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಬೈಂದೂರಿನಲ್ಲಿ ಜೆಡಿಎಸ್ ಬಲವರ್ಧನೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆದರಿಕೆಗೆ ನಾವು ಹೆದರುವುದಿಲ್ಲ. ಇನ್ನು ಹೆಚ್ಚಿನ ಪ್ರಚಾರ ಕಾರ್ಯ ಮಾಡುತ್ತೇವೆ. ಹಿಂದೆ ಸರಿ ಯುವ ಪ್ರಶ್ನೆಯೇ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾನು ಮುಳುವಾಗಿ ದ್ದೇನೆ. ದುಬೈಯಿಂದ ಬೆದರಿಕೆ ಕರೆ ಮಾಡಿದ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ರಾಜ್ಯ ಕಾರ್ಯ ದರ್ಶಿ ಶೇಖರ್ ಕೋಟ್ಯಾನ್, ಬೈಂದೂರು ಕ್ಷೇತ್ರ ಅಧ್ಯಕ್ಷ ಸಂದೇಶ್ ಭಟ್, ವಕ್ತಾರ ಪ್ರದೀಪ್ ಜಿ. ಉಪಸ್ಥಿತರಿದ್ದರು.







