ಕಾಂಗ್ರೆಸ್‌ನ 'ಎ' ಟೀಂ ಅನ್ನು ಮೂಲೆಗುಂಪು ಮಾಡಿದ ಸಿದ್ದರಾಮಯ್ಯ: ಬಿ.ಎಂ.ಫಾರೂಕ್

ಬೆಂಗಳೂರು, ಮೇ 4: ಕಾಂಗ್ರೆಸ್ ಪಕ್ಷದ 'ಎ' ಟೀಂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಆರ್.ವಿ.ದೇಶಪಾಂಡೆ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಾಗಿ ಮೂಲೆಗುಂಪಾಗಿದ್ದಾರೆ ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಟೀಕಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ 'ಬಿ' ಟೀಂ ಎಂದಿದ್ದಾರೆ. ಆದರೆ, ಜೆಡಿಎಸ್‌ನಿಂದಲೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಹಲವು ನಾಯಕರಿಂದ ಕಾಂಗ್ರೆಸ್‌ನ 'ಎ' ಟೀಂ ಮೂಲೆ ಗುಂಪಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ: ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಲು ಅನಂತ್‌ಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಒಳ ಒಪ್ಪಂದವೇ ಕಾರಣ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಹಿತಾಸಕ್ತಿಯನ್ನು ರಕ್ಷಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಮುಸ್ಲಿಮರ ಮತ್ತು ದಲಿತರ ಬಗ್ಗೆ ಕಾಂಗ್ರೆಸ್ ನಾಯಕರು ಬರಿ ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಅವರು ದೂರಿದರು.
ಕರಾವಳಿಯಲ್ಲಿ ಕೋಮು ಗಲಭೆಗಳನ್ನು ತಡೆಯಲು ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ತಡೆಯಲು ಸಿದ್ದರಾಮಯ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸುವುದಾಗಿ ಭಾಷಣ ಮಾಡಿದ್ದ ಸಿದ್ದರಾಮಯ್ಯ ಆ ಬಳಿಕ ತುಟಿ ಬಿಚ್ಚಿಲ್ಲ ಎಂದು ಅವರು ಆರೋಪಿಸಿದರು.
ಪದೇ ಪದೇ ಕೋಮು ಪ್ರಚೋದಕ ಭಾಷಣಗಳನ್ನು ಮಾಡಿದರೂ ಆರೆಸೆಸ್ಸ್ ನಾಯಕ ಪ್ರಭಾಕರ ಭಟ್ಟರ ಮೈಮುಟ್ಟುವ ಧೈರ್ಯ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಇಲ್ಲ. ಬದಲಾಗಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂತಾದ ಕಾಂಗ್ರೆಸ್ ನಾಯಕರೇ ಅವರ ಜೊತೆ ಬಹಿರಂಗ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ಫಾರೂಕ್ ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮುಸ್ಲಿಮ್ ನಾಯಕರಿಗೆ ಭವಿಷ್ಯವಿಲ್ಲ. ಬಾಬರಿ ಮಸೀದಿ ಒಡೆಯಲು ಬಿಜೆಪಿ ಜೊತೆ ಸಂಚು ಮಾಡಿದ್ದ ಕಾಂಗ್ರೆಸ್ ಈಗ ಜೆಡಿಎಸ್-ಬಿಜೆಪಿ ಮೈತ್ರಿ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಜೆಡಿಎಸ್ ಯಾವುದೆ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ. ಆದುದರಿಂದಲೆ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನರೇಂದ್ರಮೋದಿ ಮತ್ತು ಸಿದ್ದರಾಮಯ್ಯ ಇಬ್ಬರೂ ಅಲ್ಪಸಂಖ್ಯಾತ ವಿರೋಧಿಗಳು, ಅವರನ್ನು ನಂಬುವ ಪ್ರಶ್ನೆಯೇ ಇಲ್ಲ ಎಂದು ಫಾರೂಕ್ ಹೇಳಿದರು.
ಮುಸ್ಲಿಮರನ್ನು ವಿನಾಕಾರಣ ಟಿಪ್ಪು ಜಯಂತಿ ವಿಷಯದಲ್ಲಿ ಬಲಿಪಶು ಮಾಡಲಾಯಿತು. ಮುಸ್ಲಿಮರಿಗೆ ಬೇಕಾಗಿರುವುದು ಟಿಪ್ಪು ಜಯಂತಿ, ಬಹಮನಿ ಉತ್ಸವಗಳಲ್ಲ, ಅವರಿಗೆ ಬೇಕಿರುವುದು ಉನ್ನತ ಶಿಕ್ಷಣ. ಜೆಡಿಎಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಅಲಿಘಡ ವಿವಿ ಮಾದರಿಯ ಒಂದು ವಿವಿ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.
ಅಲ್ಲದೆ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮರ ಏಳಿಗೆಗಾಗಿ ನ್ಯಾ.ರಾಜೀಂದರ್ ಸಾಚಾರ್ ವರದಿಯನ್ನು ಒಂದು ತಿಂಗಳಲ್ಲಿ ತಜ್ಞರ ಸಮಿತಿಯನ್ನು ನೇಮಿಸಿ, ವರದಿ ಜಾರಿಗೆ ತರಲಾಗುವುದು ಎಂದು ಫಾರೂಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ಹಿರಿಯ ಉಪಾಧ್ಯಕ್ಷ ಅನ್ವರ್ ಶರೀಫ್, ವಕ್ತಾರ ತನ್ವೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜೆಡಿಎಸ್ ಪಕ್ಷವು 115 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ, ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಸ್ವಯಂಪ್ರೇರಿತವಾಗಿ ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ.
-ಬಿ.ಎಂ.ಫಾರೂಕ್, ಜೆಡಿಎಸ್ ಮಹಾ ಪ್ರಧಾನಕಾರ್ಯದರ್ಶಿ







