ರಾಜ್ಯ ವಿಧಾನಸಭಾ ಚುನಾವಣೆ: ಕನ್ನಡ ಪಕ್ಷದಿಂದ 38 ಅಭ್ಯರ್ಥಿಗಳು ಕಣಕ್ಕೆ
ಬೆಂಗಳೂರು, ಮೇ 4: ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಪಕ್ಷ ಕರ್ನಾಟಕ ರಾಜ್ಯಾದ್ಯಂತ 38 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಉಳಿದ ಕ್ಷೇತ್ರಗಳಲ್ಲಿ ರೈತ ಸಂಘ ಸೇರಿದಂತೆ ಮಿತ್ರ ಪಕ್ಷಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಪಕ್ಷದ ರಾಜ್ಯಾದ್ಯಕ್ಷ ಪಿ.ಪುರುಷೋತ್ತಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಕೇಂದ್ರ ಸರಕಾರದ ಕಪಿಮುಷ್ಠಿಯಲ್ಲಿದೆ. ಹಾಗಾಗಿ ಕನ್ನಡ ಪಕ್ಷಗಳು ಸೇರಿದಂತೆ ಇತರೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲು ತೊಡಕುಂಟು ಮಾಡುತ್ತಿದೆ. ಅಭ್ಯರ್ಥಿಗಳಿಗೆ ನಾಲ್ಕೈದು ದಿನವಾದರೂ ಸೀರಿಯಲ್ ನಂಬರ್ ಕೊಡುತ್ತಿಲ್ಲ. ಮಲ್ಲೇಶ್ವರದ ಅಭ್ಯರ್ಥಿಗೆ 4 ದಿನಗಳ ನಂತರ ಸೀರಿಯಲ್ ನಂಬರ್ ನೀಡಿದೆ. ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೀಳುಮಟ್ಟದ ವ್ಯವಸ್ಥೆಯನ್ನು ನೋಡಿರಲಿಲ್ಲ ಎಂದು ಕಿಡಿಕಾರಿದರು.
ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಜೆಡಿಎಸ್ ಪಕ್ಷ ರಾಜ್ಯದ ಜನತೆಯನ್ನು ಏನೆಂದು ಅರ್ಥ ಮಾಡಿಕೊಂಡಿದ್ದಾರೋ ತಿಳಿಯದು. ನಮ್ಮದು ಭ್ರಷ್ಟಾಚಾರ ರಹಿತ ಸರಕಾರ ಅಂತ ಬೀಗುತ್ತಾರೆ. ಆದರೆ, ಅಕ್ರಮ ಎಸಗಿದವರಿಗೆ ಜೈಲಿಗೆ ಹೋಗಿ ಬಂದವರಿಗೆ ಟಿಕೇಟ್ ನೀಡಿದ್ದಾರೆ. ಅಂದರೆ ಇವರ ನಡವಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಟೀಕಿಸಿದರು.
ಯುವಶಕ್ತಿ ದೇಶದ ಆಸ್ತಿ. ಸಮಾಜದ ಸಮಗ್ರ ಅಭಿವೃದ್ಧಿಗೆ ಯುವಶಕ್ತಿಯ ಬೆಂಬಲ ಅತ್ಯಗತ್ಯ. ಹಾಗಾಗಿ ಶೇ.95ರಷ್ಟು ವಿದ್ಯಾವಂತ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕನ್ನಡ ನಾಡಿಯಲ್ಲಿ ಕನ್ನಡಿಗರನ್ನೇ ಕಡೆಗಣಿಸಲಾಗುತ್ತಿದೆ. ಇದಕ್ಕೆ ರಾಜಕಾರಣಿಗಳೇ ಕಾರಣಕರ್ತರಾಗಿದ್ದಾರೆ. ಜನರು ಬದಲಾವಣೆಗೆ ನಾಂದಿ ಹಾಡಬೇಕು. ಜನತೆ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸುವ ಮೂಲಕ ಕನ್ನಡ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಜಯನಗರ ವಿಧಾನಸಭಾ ಕ್ಷೇತ್ರದಿಂದ ಡಾ.ಎ.ಪಿ. ಕರಾಟೆ ಶ್ರೀನಾಥ್, ವಿಜಯನಗರ ರವಿಕುಮಾರ್ ಗೌಡ, ಬೆಂಗಳೂರು ದಕ್ಷಿಣ ವಿ.ಚೇತನ್, ಪದ್ಮನಾಭನಗರ ಸುಮಾ ಮಹೇಶ್, ಮಲ್ಲೇಶ್ವರ ಬಿ.ಎಂ.ಆನಂದ್ ಹಾಗೂ ಬಸವನಗುಡಿಯಿಂದ ಬಿ.ಕೆ.ಪ್ರಕಾಶ್ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಪಾದರಾವ್, ಮಾಧ್ಯಮ ಕಾರ್ಯದರ್ಶಿ ಶಿವರಾಂ ಕೃಷ್ನ, ಆಶೋಕ್‌ಕುಮಾರ್ ಉಪಸ್ಥಿತರಿದ್ದರು.







