‘ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಕನಾಸಿ, ದೆವ್ವ, ರಾವಣ ಇದ್ದಂತೆ’
ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

ಬೆಳಗಾವಿ, ಮೇ 4: ‘ದೆವ್ವ ಹೊಕ್ಕ ಮನೆಯಲ್ಲಿ ಯಾರೂ ವಾಸ ಮಾಡುವುದಿಲ್ಲ. ಹೀಗಾಗಿ ಕಾಂಗ್ರೆಸಿನ ಹಿರಿಯರೆಲ್ಲ ಬಿಜೆಪಿಗೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಕನಾಸಿ, ದೆವ್ವ, ರಾವಣ ಇದ್ದಂತೆ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಂಗಾವಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಯೋಜನೆ ಇಲ್ಲಿನ ಹಳ್ಳಿಗಳಿಗೆ ಬಂದಿಲ್ಲ. ಇದರಿಂದಾಗಿ ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂಬುವುದು ಖಾತ್ರಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಕೆಲ ದೇವಸ್ಥಾನ ಹಾಗೂ ಮಠ ವಶಕ್ಕೆ ಪಡೆಯಲು ಅಧಿಸೂಚನೆ ಹೊರಡಿಸಿದ್ದರು. ಆ ಮೂಲಕ ಒಂದು ಸಮುದಾಯವನ್ನು ಗುರಿಯನ್ನಾಗಿಟ್ಟುಕೊಂಡಿದ್ದಾರೆ. ಚರ್ಚ್, ಮಸೀದಿ ವಶಕ್ಕೆ ಪಡೆಯುವ ತಾಕತ್ತು ಸಿದ್ದರಾಮಯ್ಯನವರಿಗೆ ಏಕಿಲ್ಲ ಎಂದು ಲೇವಡಿ ಮಾಡಿದರು.
ಮಸಿ ಬಳಿದುಕೊಂಡು ತಿರುಗಬೇಕು: ಎಪ್ಪತ್ತು ವರ್ಷಗಳಿಂದ ಪಾಪ ಮಾಡಿರುವ ಕಾಂಗ್ರೆಸ್‌ಗೆ ಇಲ್ಲಿ ಬದುಕಲು ಅಧಿಕಾರವಿಲ್ಲ. ಕಾಂಗ್ರೆಸ್‌ಗೆ ನೈತಿಕತೆ ಇದ್ದರೆ, ದೇಶದ ಬಗ್ಗೆ ಕಳಕಳಿಯಿದ್ದರೆ ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಮುಖಕ್ಕೆ ಮಸಿ ಬಳಿದುಕೊಂಡು ತಿರುಗಾಡಬೇಕು ಎಂದು ಟೀಕಿಸಿದರು.
ಆತ್ಮಹತ್ಯೆ ಸ್ಥಿತಿಗೆ ದೂಡಿ: ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಜೊತೆಗೆ ದೇಶ ಕೂಡ ಹಾಳು ಮಾಡುತ್ತಿದ್ದಾರೆ. ಹೀಗಾಗಿ ನಾವೆಲ್ಲ ಒಟ್ಟಿಗೆ ನಿಲ್ಲುತ್ತಿಲ್ಲ. ಅದೇ ನಮ್ಮ ದೌರ್ಬಲ್ಯ. ನಾವೆಲ್ಲರೂ ಒಂದಾಗಿ ನಿಂತರೆ ಸಿದ್ದರಾಮಯ್ಯನಂತವರು ದೇಶದಲ್ಲಿ ಉಳಿಯುವುದಿಲ್ಲ. ಇಂತಹವರಿಗೆ ಅಧಿಕಾರ ನೀಡದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ದೂಡಬೇಕು ಎಂದು ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದರು.







