ಮಹಿಳೆಯರನ್ನು ಗೌರವಿಸುವುದನ್ನು ಕಲಿಸಿದರೆ ದೌರ್ಜನ್ಯಗಳು ನಡೆಯುವುದಿಲ್ಲ: ಪ್ರಧಾನಿ ಮೋದಿ

ಬೆಂಗಳೂರು, ಮೇ 4: ‘ನಾವು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮಾತ್ರ ಎಲ್ಲಿಗೆ ಹೋಗಿದ್ದೆ? ಯಾರನ್ನು ಭೇಟಿಯಾಗಿದ್ದೆ ? ಎಂಬುದಾಗಿ ಕೇಳುತ್ತೇವೆ. ಆದರೆ, ಗಂಡು ಮಕ್ಕಳಿಗೆ ಕೇಳುವುದಿಲ್ಲ. ಮಹಿಳೆಯರನ್ನು ಗೌರವಿಸುವುದನ್ನು ಕಲಿಸಿದರೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುವುದಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶುಕ್ರವಾರ ಮೋದಿ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದ ಅವರು, ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬ ಬಗ್ಗೆ ಮಕ್ಕಳಿಗೆ ಪಾಠ ಕಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಲಹೆ ಮಾಡಿದರು.
ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವಲ್ಲಿ ವಿಫಲವಾಗಿದೆ. ಮಹಿಳೆಯರ ಸುರಕ್ಷತೆಗೆ ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೆ ತಂದಿದೆ. 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಮಹಿಳೆಯರು ಬಹುದೊಡ್ಡ ಪಾತ್ರ ವಹಿಸಲಿದ್ದು, ಜನರನ್ನು ಒಪ್ಪಿಸುವ ಸಾಮರ್ಥ್ಯ ಮಹಿಳೆಯರಿಗಿದೆ. ಮಹಿಳೆ ತನ್ನ ಮನೆಯಲ್ಲಿ ಪ್ರಚಾರ ನಡೆಸಿದರೂ ಇಡೀ ಕುಟುಂಬದ ಸದಸ್ಯರನ್ನು ಒಪ್ಪಿಸಬಲ್ಲಳು ಎಂದ ಅವರು, ಪ್ರತಿಯೊಬ್ಬರು ಮನೆ ಮನೆಗೆ ತೆರಳಿ ಮತದಾರರನ್ನು ಮತಗಟ್ಟೆಗೆ ತರಬೇಕು. ಮತಗಟ್ಟೆಯಲ್ಲಿ ನಾವು ಜಯಗಳಿಸಿದರೆ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
ಮೋರ್ಚಾ ಉಪಾಧ್ಯಕ್ಷೆ ರಾಣಿ ಸಂಯುಕ್ತ, ನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಆಶಾರಾವ್ ಸೇರಿದಂತೆ ಮೋರ್ಚಾ ಕಾರ್ಯಕರ್ತೆಯರ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಿದರು.







