ಬಸ್ ಬೆಂಕಿಗಾಹುತಿ ಪ್ರಕರಣ: 27 ಮಂದಿ ಸತ್ತ ಸುದ್ದಿ ಸುಳ್ಳು!

ಮೋತಿಹರಿ, ಮೇ.4: ಬಿಹಾರದ ಮೋತಿಹರಿಯಲ್ಲಿ ಬಸ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ 27 ಮಂದಿ ಸಜೀವ ದಹನವಾಗಿದ್ದಾರೆ ಎಂದು ಗುರುವಾರ ಹಬ್ಬಿದ ಸುದ್ದಿಯು ಸಂಪೂರ್ಣ ಸುಳ್ಳು. ಇಂಥದ್ದೊಂದು ಘಟನೆ ನಡೆದಿದ್ದರೂ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ದಿನೇಶ್ ಚಂದ್ರ ಯಾದವ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಘಾತ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಯಾದವ್, ಈ ಘಟನೆಯಲ್ಲಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಸುಳ್ಳಾಗಿದೆ. ನಾವು ಸ್ಥಳೀಯರಿಂದ ಪಡೆದ ಮಾಹಿತಿಯ ಆಧಾರದಲ್ಲಿ ಗುರುವಾರ 27 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದೆವು. ಆದರೆ ಇದನ್ನು ಅಂತಿಮ ವರದಿಯ ನಂತರವೇ ದೃಢಪಡಿಸುವುದಾಗಿ ತಿಳಿಸಿದ್ದೆವು ಎಂದು ತಿಳಿಸಿದ್ದಾರೆ. ನತದೃಷ್ಟ ಬಸ್‌ನಲ್ಲಿ ಕೇವಲ 13 ಮಂದಿ ಪ್ರಯಾಣಿಸಿದ್ದರು. ಈ ಪೈಕಿ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಉಳಿದ ಐದು ಮಂದಿಯ ಬಗ್ಗೆ ಯಾವುದೇ ಕುರುಹು ಲಭ್ಯವಾಗಿಲ್ಲ. ಅವರ ಮೃತದೇಹ ಕೂಡಾ ಘಟನಾಸ್ಥಳದಲ್ಲಿ ದೊರೆತಿಲ್ಲ. ಹಾಗಾಗಿ ಅವರು ತಾವಾಗಿಯೇ ಸ್ಥಳದಿಂದ ತೆರಳಿರಬಹುದು ಎಂದು ಸಂಶಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು ಮೂರು ಗಂಟೆಯ ವೇಳೆಗೆ ನಡೆದಿದ್ದು, ದ್ವಿಚಕ್ರ ವಾಹನವನ್ನು ತಪ್ಪಿಸುವ ಭರದಲ್ಲಿ ಬಸ್ಸನ್ನು ಏಕಾಏಕಿ ತಿರುಗಿಸಿದ ಪರಿಣಾಮ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿತ್ತು.





