ಸಕ್ಕರೆ ಮೇಲೆ ಉಪಕರ ನಿರ್ಧಾರ ಮುಂದೂಡಿದ ಜಿಎಸ್‌ಟಿ ಸಮಿತಿ

ಹೊಸದಿಲ್ಲಿ, ಮೇ 4: ಜಿಎಸ್‌ಟಿ ಸಮಿತಿಯು ಸಕ್ಕರೆ ಮೇಲೆ ಉಪಕರ ವಿಧಿಸುವ ನಿರ್ಧಾರವನ್ನು ಮುಂದೂಡಿದ್ದು, ಡಿಜಿಟಲ್ ಪಾವತಿಗೆ ಪ್ರೋತ್ರಾಹ ನೀಡುವ ವಿಷಯವನ್ನು ರಾಜ್ಯಗಳ ವಿತ್ತಸಚಿವರ ತಂಡಕ್ಕೆ ವಹಿಸಿಕೊಟ್ಟಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯುನ್ನತ ಸಂಸ್ಥೆಯಾಗಿರುವ ಜಿಎಸ್‌ಟಿ ಸಮಿತಿಯ 27ನೇ ಸಭೆಯಲ್ಲಿ ಜಿಎಸ್‌ಟಿ ಜಾಲಬಂಧ(ನೆಟ್‌ವರ್ಕ್)ವನ್ನು ಸರಕಾರಿ ಮಾಲಕತ್ವದ ಸಂಸ್ಥೆಯಾಗಿ ಪರಿವರ್ತಿಸುವ ಶಿಫಾರಸಿಗೆ ಒಪ್ಪಿಗೆ ಸೂಚಿಸಲಾಯಿತು.
ಏಕ ಮಾಸಿಕ ರಿಟರ್ನ್ ಫೈಲಿಂಗ್ ವ್ಯವಸ್ಥೆ ಮುಂದಿನ ಆರು ತಿಂಗಳೊಳಗೆ ಜಾರಿಗೆ ಬರಲಿದೆ ಎಂದು ವಿತ್ತ ಇಲಾಖೆಯ ಕಾರ್ಯದರ್ಶಿ ಹಸ್‌ಮುಖ್ ಆಧಿಯಾ ತಿಳಿಸಿದ್ದಾರೆ.
ಜಿಎಸ್‌ಟಿ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು. ಎಲ್ಲಾ ವ್ಯವಹಾರಗಳನ್ನೂ ಡಿಜಿಟಲ್ ವ್ಯವಸ್ಥೆ ಅಥವಾ ಚೆಕ್ ಮೂಲಕ ನಡೆಸುವವರಿಗೆ ಶೇ.2ರಷ್ಟು ಪ್ರೋತ್ಸಾಹ ನೀಡುವ ನಿರ್ಧಾರಕ್ಕೆ ಬಹುತೇಕ ರಾಜ್ಯಗಳು ಒಲವು ತೋರಿವೆ . ಕೆಲವು ರಾಜ್ಯಗಳು ನಕಾರ ಸೂಚಿಸಿರುವುದರಿಂದ ಈ ವಿಷಯವನ್ನು ರಾಜ್ಯಗಳ ವಿತ್ತ ಸಚಿವರನ್ನೊಳಗೊಂಡಿರುವ ಐದು ಸದಸ್ಯರ ಸಮಿತಿಗೆ ವಹಿಸಲಾಗಿದೆ ಎಂದು ಜೇಟ್ಲಿ ತಿಳಿಸಿದರು. ಜಿಎಸ್‌ಟಿ ದರವನ್ನು ಮೀರಿ ಸಕ್ಕರೆಯ ಮೇಲೆ ಉಪಕರ ವಿಧಿಸುವ ವಿಷಯವನ್ನು ಇನ್ನೊಂದು ಸಚಿವರ ತಂಡ ಪರಿಶೀಲಿಸಲಿದೆ ಎಂದವರು ತಿಳಿಸಿದರು.
ಈಗ ಜಿಎಸ್‌ಟಿ ಜಾಲಬಂಧದ ಶೇ.24.5ರಷ್ಟು ಕೇಂದ್ರದ ಒಡೆತನದಲ್ಲಿದ್ದು, ಉಳಿದ ಎಲ್ಲಾ ರಾಜ್ಯಗಳೂ ಸೇರಿ ಒಟ್ಟು ಶೇ. 24.5 ಒಡೆತನ ಹೊಂದಿವೆ. ಉಳಿದ ಶೇ.51ರಷ್ಟು ಭಾಗವನ್ನು ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಎನ್‌ಎಸ್‌ಇ ಸ್ಟ್ರಟೆಜಿಕ್ ಇನ್‌ವೆಸ್ಟ್ ಕಂಪೆನಿ ಮುಂತಾದ ಖಾಸಗಿ ವಿತ್ತ ಸಂಸ್ಥೆಗಳು ಹೊಂದಿವೆ. ಈಗ ಖಾಸಗಿ ಸಂಸ್ಥೆಗಳು ಹೊಂದಿರುವ ಪಾಲನ್ನು ಖರೀದಿಸಿ ಜಿಎಸ್‌ಟಿ ಜಾಲಬಂಧವನ್ನು ಸಂಪೂರ್ಣ ಸರಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿಸುವ ಪ್ರಸ್ತಾವಕ್ಕೆ ಸಮಿತಿ ಒಪ್ಪಿಗೆ ನೀಡಿದೆ. ಹೊಸ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಶೇ.50ರಷ್ಟು ಹಾಗೂ ಉಳಿದ ಶೇ.50ರಷ್ಟು ಪಾಲನ್ನು ರಾಜ್ಯ ಸರಕಾರಗಳು ಹೊಂದಿರುತ್ತವೆ ಎಂದು ಜೇಟ್ಲಿ ತಿಳಿಸಿದರು.







