ಮಂಡ್ಯ: ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆ ಬಿಡುಗಡೆ

ಮಂಡ್ಯ,ಮೇ.04: ನಗರದ ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆಯನ್ನು ರೈತಸಂಘದ ಮುಖಂಡರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಭ್ಯರ್ಥಿಗಳು ಕ್ಷೇತ್ರಗಳಲ್ಲಿ ಹಾಗೂ ರಾಜ್ಯಕ್ಕೆ ತಾವು ನೀಡುವ ಕೊಡುಗೆಯ ಸಂಬಂಧ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಸ್ವರಾಜ್ ಇಂಡಿಯಾ ಪಕ್ಷವು ಹೋರಾಟದ, ಜನಾಂದೋಲನದ ಹಿನ್ನಲೆಯಿಂದ ಸೃಷ್ಠಿಯಾದ ಪಕ್ಷವಾಗಿದ್ದು, ಮೇಲುಕೋಟೆ ಸೇರಿದಂತೆ 11 ಮಂದಿ ಪಕ್ಷದಿಂದ ಸ್ಪರ್ಧಿಸಿದ್ದಾರೆ ಎಂದು ಅವರು ಹೇಳಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದೇಶದ ದಿಕ್ಕು ಬದಲಾಯಿಸುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ ಎಂದು ವಿವರಿಸಿದರು. ಇಂದಿನ ದಿನಗಳ ರಾಜಕಾರಣ ಹಣ ಬಲದಿಂದ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಜನತೆಯೇ ಸಕ್ರಿಯವಾಗಿ ಪಾಲ್ಗೊಂಡು ಚುನಾವಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಶೇ.47ರಷ್ಟಿರುವ ಯುವಕರ ಉತ್ಸಾಹ ಚುನಾವಣೆಗೆ ಗಟ್ಟಿ ನೆಲೆ ಕಟ್ಟಿಕೊಟ್ಟಿದ್ದು, ಮಹಿಳೆಯರು ಹಾಗೂ ಹಿರಿಯರು ಸ್ವರಾಜ್ ಇಂಡಿಯಾ ಪಕ್ಷಕ್ಕೆ ಆಶೀರ್ವದಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ರಾಮಸ್ವಾಮಿ, ರವಿಕಿರಣ್ ಪೂರ್ಣಾಚಾರ್, ರಾಮಣ್ಣ ಹಾಗೂ ತಮ್ಮಣ್ಣ ಉಪಸ್ಥಿತರಿದ್ದರು.







