ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ: ಆರೋಪ ಸಾಬೀತು
ಮೇ8ರಂದು ಶಿಕ್ಷೆ ಪ್ರಕಟ

ಮಂಗಳೂರು, ಮೇ 4: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆಮನೆ ಎಂಬಲ್ಲಿ 2014ರ ಎ.19ರಂದು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆಗೈದ ಆರೋಪವು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆ ಪ್ರಮಾಣವು ಮೇ 8ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಕಳೆಂಜ ಶಾಖೆಯಲ್ಲಿ ಫಾರೆಸ್ಟರ್ ಆಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಥಾಂಡಾ ನಿವಾಸಿ ಟಿ.ರುದ್ರೇಶ (32) ಕೊಲೆ ಪ್ರಕರಣದ ಮೊದಲ ಆರೋಪಿ. ಈತ ಶಾಲೆ ಮನೆ ನಿವಾಸಿ ಅಣ್ಣಯ್ಯ ಗೌಡರ ಪತ್ನಿ ಅಮಿತಾ ಯಾನೆ ದೇವಕಿ (42) ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಮಿತಾ ಯಾನೆ ದೇವಕಿ ಈ ಪ್ರಕರಣದ ಎರಡನೇ ಆರೋಪಿ. ಇವರಿಬ್ಬರು ಕಬ್ಬಿಣದ ರಾಡ್‌ನಿಂದ ಹೊಡೆದು 2014ರ ಎ.19ರಂದು ರಾತ್ರಿ 11ಗಂಟೆಗೆ ಅಣ್ಣಯ್ಯ ಗೌಡರನ್ನು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣದ ಬಗ್ಗೆ ಸ್ವತಃ ಅಮಿತಾ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಸ್ತುತ ಈ ಪ್ರದೇಶ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಮೂವರು ಮುಸುಕುಧಾರಿಗಳು ಮನೆಯ ಮಾಡಿನ ಹೆಂಚು ತೆಗೆದು ಒಳ ಬರಲು ಪ್ರಯತ್ನಿಸಿ ವಿಫಲರಾದ ಬಳಿಕ ಹಿಂಬದಿಯ ಬಾಗಿಲು ಮುರಿದು ಒಳ ಬಂದು ಗಂಡನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅಮಿತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಳು. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಇದು ಸುಳ್ಳು ದೂರು ಎನ್ನುವುದು ಗಮನಕ್ಕೆ ಬಂದಿತ್ತು. ಅದರಂತೆ ಅಮಿತಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ರುದ್ರೇಶ್ ಮತ್ತು ಅಮಿತಾರ ಮಧ್ಯೆ ಅನೈತಿಕ ಸಂಬಂಧವಿರುವುದು ಹಾಗೂ ಇದಕ್ಕೆ ಅಣ್ಣಯ್ಯ ಗೌಡ ಅಡ್ಡಿಯಾದುದು ಬೆಳಕಿಗೆ ಬಂದಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಪ್ರಿಯಕರನ ಜೊತ ಸಂಚು ರೂಪಿಸಿದ್ದಲ್ಲದೆ ಅದರಂತೆ ಕೊಲೆಗೈದು ಬಳಿಕ ಪೊಲೀಸರಿಗೆ ಸುಳ್ಳು ದೂರು ನೀಡಿ ಸಿಕ್ಕಿಬಿದ್ದಿದ್ದಳು. ಪೊಲೀಸರ ಸಕಾಲಿಕ ತನಿಖೆಯಿಂದ ಕೊಲೆಕೃತ್ಯ ಬಯಲಿಗೆ ಬಂದಿತ್ತು. ಅದರಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಎ.22ರಂದು ಬಂಧಿಸಿದ್ದರು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಕೊಲೆ ಮಾಡಲು ಒಳಸಂಚು (ಐಪಿಸಿ ಸೆಕ್ಷನ್ 120ಎ), ಕೊಲೆ (ಐಪಿಸಿ ಸೆಕ್ಷನ್ 302), ಸಾಕ್ಷಿ ನಾಶ (ಐಪಿಸಿ ಸೆಕ್ಷನ್ 201) ಸುಳ್ಳು ಸುದ್ದಿ ನೀಡಿರುವುದು (ಐಪಿಸಿ ಸೆಕ್ಷನ್ 203) ಪ್ರಕರಣ ದಾಖಲಾಗಿತ್ತು. ಈ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ಇದೀಗ ಸಾಬೀತಾಗಿದೆ.
ನ್ಯಾಯಾಧೀಶರಾದ ಶಾರದಾ ಬಿ. ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದೆ ಎಂದು ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.
ಸಾಂದರ್ಭಿಕ ಸಾಕ್ಷಿ: ಈ ಪ್ರಕರಣದಲ್ಲಿ ಯಾವುದೇ ನೇರ ಸಾಕ್ಷಿ ಇರಲಿಲ್ಲ. ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಪ್ರಕರಣ ಸಾಬೀತಾಗಿರುವುದು ಗಮನಾರ್ಹ. ಪೊಲೀಸರು ಒಟ್ಟು 45 ಸಾಕ್ಷಿದಾರರನ್ನು ಪಟ್ಟಿ ಮಾಡಿದ್ದರು. ಆ ಪೈಕಿ 36 ಮಂದಿಯನ್ನು ವಿಚಾರಣೆ ನಡೆಸಲಾಗಿದೆ. 39 ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರಲ್ಲಿ ರಕ್ತದ ಕಲೆಗಳಿರುವ ಬಟ್ಟೆ, ರುದ್ರೇಶ್ ಬಂದಿರುವುದನ್ನು ಗಮನಿಸಿದವರು ಹೇಳಿದ ಸಾಕ್ಷಿ, ಹತ್ಯೆ ಮಾಡಲು ಬಳಸಿದ ಆಯುಧ, ಫೋನ್ ಕರೆ ವಿವರ ಇತ್ಯಾದಿ ಪ್ರಬಲ ಸಾಕ್ಷಿಗಳಾಗಿತ್ತು.
ಅಣ್ಣಯ್ಯ ಗೌಡರ ಮೇಲೆ ಈ ಹಿಂದೆಯೂ ರಾತ್ರಿ ಮಲಗಿದ್ದ ವೇಳೆ ವಿದ್ಯುತ್ ಹಾಯಿಸಿ ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಇದು ಸ್ಥಳೀಯರಿಗೆ ತಿಳಿದಿತ್ತು. ಸಾಕ್ಷಿ ಹೇಳಿಕೆ ಸಂದರ್ಭ ಸಾಕ್ಷಿದಾರರು ಇದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇವೆಲ್ಲವುಗಳನ್ನು ಪರಿಗಣಿಸಿ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.







