ಹನೂರು: ಬಿಜೆಪಿ ಅಭ್ಯರ್ಥಿ ಪ್ರೀತನ್ ಪರವಾಗಿ ಶ್ರೀರಾಮುಲು ರೋಡ್ ಶೋ

ಹನೂರು,ಮೇ.04: ಸಿದ್ದರಾಮಯ್ಯ ರವರ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದು ಶ್ರೀರಾಮುಲು ಆರೋಪ ಮಾಡಿದರು.
ಹನೂರು ತಾಲೂಕಿನ ಕೌದಳ್ಳಿಯಲ್ಲಿ ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತನ್ ಪರವಾಗಿ ಮತಯಾಚಿಸಿ ರೋಡ್ ಶೋ ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಪಕ್ಷ ಸುಮಾರು 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮೋದಿ ನೇತೃತ್ವದ ಸರ್ಕಾರ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರ ವಿಶ್ವಾಸಗಳಿಸಿದೆ. ಆದರೆ ಸಿದ್ದರಾಮಯ್ಯ ರವರ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ ಎಂದು ಆರೋಪ ಮಾಡಿದರು.
ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ತಂದೆಯವರಾದ ನಾಗಪ್ಪರವರು ಹಲವಾರು ಜನಪರ ಕೆಲಸಗಳನ್ನು ಮಾಡಿದ್ದು, ಈ ಬಾರಿ ನನಗೆ ಮತ ಹಾಕುವುದರ ಮುಖಾಂತರ ಯಡಿಯೂರಪ್ಪ ರವರು ಮುಖ್ಯಮಂತ್ರಿಯಾಗಲು ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ರು, ಮಾನಸ ದತ್ತೇಶ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ರಂಗಸ್ವಾಮಿ, ಶಿವಕುಮಾರ್, ಬಾರ್ ನಾಗರಾಜು, ಇರ್ಷಾದ್ ಪಾಷ, ವಾಲ್ಮೀಕಿ ಜನಾಂಗದ ಮುಖಂಡರಾದ ಮುತ್ತುರಾಜು, ಸೀಗನಾಯಕ, ಕೃಷ್ಣ, ಮಲ್ಲೇಶ್ ಮುಂತಾದವರು ಹಾಜರಿದ್ದರು.







