ಶಾಸಕ ಡಾ.ರಫೀಕ್ ಅಹಮದ್ ತಂದೆ ನಿಧನ
ತುಮಕೂರು,ಮೇ.04: ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಅವರ ತಂದೆ ಶೇಖ್ ಮೊಹಮದ್ ಇಸ್ಮಾಯಿಲ್(82) ಶುಕ್ರವಾರ ಬೆಳಗ್ಗೆ ತುಮಕೂರಿನ ಜಯನಗರದಲ್ಲಿರುವ ಅವರ ಹಿರಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಸಿವಿಲ್ ಇಂಜಿನಿಯರ್ ಓದಿದ ಅವರು ಸರಕಾರಿ ಸೇವೆಗೆ ಸೇರಿ ಭದ್ರ ಅಣೆಕಟ್ಟು ಯೋಜನೆ, ಕೃಷ್ಣಾ ಅಣೆಕಟ್ಟು ಯೋಜನೆಗೆ ಸೇರಿದಂತೆ ಹಲವು ನೀರಾವರಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿಯಲ್ಲಿ ಜನಿಸಿದ ಇವರು,1960ರಲ್ಲಿ ನೀರಾವರಿ ಇಲಾಖೆಗೆ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿ, ಸೂಪರಿಡೆಂಟ್ ಇಂಜಿನಿಯರ್ ಆಗಿ 1991ರಲ್ಲಿ ನಿವೃತ್ತರಾಗಿದ್ದರು. ನಾಲ್ಕು ಗಂಡು ಹಾಗೂ ಓರ್ವ ಹೆಣ್ಣುಮಗಳನ್ನು ಹೊಂದಿದ್ದು, ಇವರ ಮೂರನೇ ಮಗ ಶೇಖ್ ಡಾ.ರಫೀಕ್ ಅಹಮದ್ ತುಮಕೂರು ನಗರದ ಶಾಸಕರಾಗಿದ್ದರೆ, ಮೊದಲ ಮಗ ಲೋಕೋಪಯೋಗಿ ಇಲಾಖೆಯ ಎಇಇ ಆಗಿ ಕಾರ್ಯನಿರ್ವಹಿಸುತಿದ್ದರೆ, ಇನ್ನಿಬ್ಬರು ಹೆಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಗಳು ಸಹ ತುಮಕೂರು ನಗರದಲ್ಲಿಯೇ ನೆಲೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಶಾಸಕರಿಗೆ ತಂದೆಯ ಸಾವಿನ ಸುದ್ದಿ ತಿಳಿಯುತಿದ್ದಂತೆಯೇ ಪ್ರಚಾರವನ್ನು ಮೊಟಕುಗೊಳಿಸಿ, ತಂದೆಯ ಮೃತದೇಹ ನೋಡಲು ತೆರಳಿದರು.





