ಮೂರು ಗಂಟೆಗಳನ್ನು ಮೀಸಲಿಡಲಾಗದಿದ್ದರೆ ರಾಷ್ಟ್ರ ಪ್ರಶಸ್ತಿ ನೀಡುವುದನ್ನು ನಿಲ್ಲಿಸಿ: ರಸೂಲ್ ಪೂಕುಟ್ಟಿ

ಹೊಸದಿಲ್ಲಿ, ಮೇ.4: ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿರುವ 137 ಮಂದಿಯ ಪೈಕಿ ರಾಷ್ಟ್ರಪತಿಗಳು ಕೇವಲ ಹನ್ನೊಂದು ಕಲಾವಿದರಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಿರುವ ಕಾರಣಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿಗ್ರಹಣ ತಜ್ಞ ರಸೂಲ್ ಪೂಕುಟ್ಟಿ ತೀವ್ರ ಅಸಮಾಧಾನಗೊಂಡಿದ್ದಾರೆ. ಭಾರತ ಸರಕಾರಕ್ಕೆ ಮೂರು ಗಂಟೆಗಳ ಸಮಯ ಮೀಸಲಿಡಲು ಸಾಧ್ಯವಾಗದಿದ್ದರೆ ಅದು ರಾಷ್ಟ್ರ ಪ್ರಶಸ್ತಿಯನ್ನು ನೀಡುವುದನ್ನು ನಿಲ್ಲಿಸಬೇಕು. ನಮ್ಮ ಬೆವರಿನ ಶೇ. 50ಕ್ಕೂ ಹೆಚ್ಚು ಭಾಗ ನೀವು ಮನರಂಜನಾ ತೆರಿಗೆ ರೂಪದಲ್ಲಿ ಪಡೆಯುತ್ತೀರಿ. ಕನಿಷ್ಟ ನಮಗೆ ಅಮೂಲ್ಯವಾಗಿರುವ ಮೌಲ್ಯಗಳಿಗಾದರೂ ಗೌರವ ನೀಡಿ ಎಂದು ಪೂಕುಟ್ಟಿ ಕಿಡಿಕಾರಿದ್ದಾರೆ. ರಾಷ್ಟ್ರಪತಿ ಕೇವಲ ಹನ್ನೊಂದು ಜನರಿಗಷ್ಟೇ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಉಳಿದವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿ ಹಾಗೂ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಪ್ರಶಸ್ತಿ ನೀಡಲಿದ್ದಾರೆ ಎಂದು ಬುಧವಾರದಂದು ಪ್ರಶಸ್ತಿ ವಿಜೇತರಿಗೆ ತಿಳಿಸಲಾಗಿತ್ತು. ಅತ್ಯುತ್ತಮ ಧ್ವನಿಗ್ರಹಣ ಪ್ರಶಸ್ತಿಗೆ ವಿಲೇಜ್ ರಾಕ್‌ಸ್ಟಾರ್ಸ್ ಚಿತ್ರಕ್ಕೆ ಮಲ್ಲಿಕಾ ದಾಸ್ ಹಾಗೂ ವಾಕಿಂಗ್ ವಿದ್‌ದ ವಿಂಡ್ ಸಿನಿಮಾಕ್ಕಾಗಿ ಸನಲ್ ಜಾರ್ಜ್ ಮತ್ತು ಜಸ್ಟಿನ್ ಎ.ಜೋಸ್‌ರನ್ನು ಆಯ್ಕೆ ಮಾಡಿರುವ ಸಮಿತಿಯ ನಿರ್ಧಾರದ ವಿರುದ್ಧ ಪೂಕುಟ್ಟಿ ಕಳೆದ ತಿಂಗಳು ಅಸಮಾಧಾನ ವ್ಯಕ್ತಪಡಿಸಿದ್ದರು.





