ಈ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಆರ್.ವಿ.ದೇಶಪಾಂಡೆ

ಹೊನ್ನಾವರ,ಮೇ.04: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗುತ್ತದೆ. ಕುಮಟಾ ಕ್ಷೇತ್ರದ ಅಭ್ಯರ್ಥಿ ಶಾರದಾ ಶೆಟ್ಟಿ ಅವರು ಬಡವರ, ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದಾರೆ, ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಎಂದು ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಬ್ರದರ್ಸ್ ಸ್ಕೂಲ್ ಮೈದಾನದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದ ಎನ್.ಡಿ.ಎ ಸರ್ಕಾರದಲ್ಲಿ ಕಳೆದ ಆರು ತಿಂಗಳಿನಿಂದ ಮಿತ್ರಪಕ್ಷಗಳು ಶತ್ರುಗಳಾಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರದ ಅಸ್ಥಿತ್ವವಿರುವುದಿಲ್ಲ. ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ ಭರವಸೆ ಈವರೆಗೂ ನೀಡಿಲ್ಲ. ಎ.ಟಿ.ಎಂಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿಯಾಗಿದೆ. ಡಿಸೇಲ್, ಪೆಟ್ರೋಲ್ ದರ ಏರುತ್ತಲೆ ಇದೆ. ದೇಶದ ಅರ್ಥವ್ಯವಸ್ದೆ ಹದಗೆಟ್ಟುಹೋಗಿದೆ. ಬಿಜೆಪಿಯ ಸಚಿವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಈ ಹಿಂದೆ ನಮ್ಮ ಪಕ್ಷದವರೂ ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿದ್ದರು. ಆದರೆ ಇಂದು ಗಂಭೀರವಾದ ಬದಲಾವಣೆಯ ಮಾತನಾಡುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಶಕ್ತಿಯಿಲ್ಲ. ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ನೀಡಿದಂತೆ ಎಂದರು.
ಕುಮಟಾ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿ ಮಹಿಳೆಯಾಗಿಯೂ ನನ್ನ ನೀರಿಕ್ಷೆಗೂ ಮೀರಿ ಅಭಿವೃದ್ದಿಯನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ಹಿಂದೆದೂ ಕಾಣದಷ್ಟು ಕ್ಷೇತ್ರದ ಅಭಿವೃದ್ಧಿ ಕೆಲಸ ಸತತ ಪ್ರಯತ್ನದಿಂದ ಮಾಡಿ ತೋರಿಸಿದ್ದಾರೆ. ಕ್ಷೇತ್ರದ ಬಹುತೇಕ ರಸ್ತೆಗಳು, ಸೇತುವೆಗಳನ್ನು ನಿರ್ಮಿಸಿದ್ದಾರೆ. ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳನ್ನು ಕ್ಷೇತ್ರದ ಜನತೆಗೆ ತಲುಪಿಸಿ ಅಭಿವೃದ್ದಿ ಪರವಾಗಿದ್ದಾರೆ. ಇದನ್ನು ಜನತೆಗೆ ತಿಳಿಸುವ ಬಹುದೊಡ್ಡ ಜವಾಬ್ದಾರಿ ಕಾರ್ಯಕರ್ತರು ಹಾಗೂ ಮುಖಂಡರ ಮೇಲಿದೆ. ಈ ಬಾರಿ ಅವರು ಅಭ್ಯರ್ಥಿಯಾಗಿದ್ದು ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ಕಳೆದ 5 ವರ್ಷಗಳಿಂದ ಶಾಸಕಿ ಶಾರದಾ ಶೆಟ್ಟಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ದಿ ಕೆಲಸಗಳು ಈಗಲೂ ನಡೆಯುತ್ತಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಭಿವೃದ್ದಿಯನ್ನು ಮರೆತು ಸಂವಿಧಾನ ಬದಲಿಸಬೇಕು ಎಂಬ ಮಾತು ಹೇಳುತ್ತಿದ್ದಾರೆ. ಇದನ್ನು ಬಿಜೆಪಿ ಮತ್ತು ಆರೆಸ್ಸೆಸ್ ನವರು ಅನಂತಕುಮಾರ ಹೆಗಡೆಯಿಂದ ಹೇಳಿಸುತ್ತಿದ್ದಾರೆ. ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಅನೇಕರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಆದರೆ ಈ ಪಕ್ಷೇತರ ಅಭ್ಯರ್ಥಿಗಳು ಯಾವ ತತ್ವದಲ್ಲಿ ಮತ ಕೇಳುತ್ತಾರೆ ? ಯಾವ ಮುಖವಿಟ್ಟು ಮತದಾರರ ಬಳಿ ಹೋಗುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ ಎಂದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ, ಕಾಂಗ್ರೆಸ್ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ, ಪ.ಪಂ.ಅಧ್ಯಕ್ಷೆ ರಾಜಶ್ರೀ ನಾಯ್ಕ, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಗೌಡ, ನೇತ್ರಾವತಿ ಹೆಗಡೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಪ ತೆಂಗೇರಿ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಮುಖಂಡರಾದ ಹುಸೇನ್ ಖಾದ್ರಿ, ಅಗ್ನೆಲ್ ಡಯಾಸ್, ಶ್ರೀಕಾಂತ ಮೇಸ್ತ ಉಪಸ್ದಿತರಿದ್ದರು.







