ಬುಕ್ಕಿ ಚಾವ್ಲಾನನ್ನು ತಿಹಾರ್ ಜೈಲಿಗೆ ಕಳುಹಿಸಿದರೆ ಅಪಾಯ ಖಚಿತ
ಬ್ರಿಟನ್ ಹೈಕೋರ್ಟ್ ತೀರ್ಪು

ಲಂಡನ್, ಮೇ 5: ಕ್ರಿಕೆಟ್ ಬುಕ್ಕಿ ಸಂಜೀವ್ ಚಾವ್ಲಾನನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಹಾಗೂ ಆತನನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಇರಿಸಿದರೆ, ಆತನಿಗೆ ನಿಜವಾದ ಅಪಾಯವಿದೆ ಎಂದೆನಿಸುತ್ತದೆ ಎಂದು ಬ್ರಿಟನ್ ಹೈಕೋರ್ಟ್ ಶುಕ್ರವಾರ ಹೇಳಿದೆ. ಅದೇ ವೇಳೆ, ಆತನ ಮಾನವಹಕ್ಕುಗಳನ್ನು ಉಲ್ಲಂಘಿಸಲಾಗುವುದಿಲ್ಲ ಎಂಬುದಾಗಿ ಹೆಚ್ಚಿನ ವಿಶ್ವಾಸಾರ್ಹ ಭರವಸೆಗಳನ್ನು ಭಾರತ ಸರಕಾರ ನೀಡಬೇಕೆಂದು ಅದು ಬಯಸಿದೆ.
ಚಾವ್ಲಾನ ಗಡಿಪಾರು ಕೋರಿಕೆಯನ್ನು ತಳ್ಳಿಹಾಕಿ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯ ಅಕ್ಟೋಬರ್ 2017ರಲ್ಲಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಭಾರತ ಸಲ್ಲಿಸಿರುವ ಮೇಲ್ಮನವಿಗೆ ರಾಯಲ್ಸ್ ಕೋರ್ಟ್ ಆಫ್ ಜಸ್ಟಿಸ್‌ನ ನ್ಯಾಯಾಧೀಶರಾದ ಜಾರ್ಜ್ ಲೆಗಟ್ ಮತ್ತು ಜೇಮ್ಸ್ ಡಿಂಗ್‌ಮನ್ ತಡೆ ನೀಡಿದರು.
2000ದಲ್ಲಿ ದಕ್ಷಿಣ ಆಫ್ರಿಕದ ಭಾರತ ಪ್ರವಾಸ ಸಂದರ್ಭದಲ್ಲಿ ನಡೆದಿದೆಯೆನ್ನಲಾದ ಮ್ಯಾಚ್‌ಫಿಕ್ಸಿಂಗ್‌ಗಳಲ್ಲಿ ಚಾವ್ಲಾ ಭಾಗಿಯಾಗಿದ್ದನು ಎಂದು ಆರೋಪಿಸಲಾಗಿದೆ.
ಮಾನವಹಕ್ಕುಗಳ ಕುರಿತ ಯುರೋಪಿಯನ್ ಒಪ್ಪಂದದ 3ನೇ ವಿಧಿಯನ್ವಯ ಚಾವ್ಲಾನ ಹಕ್ಕುಗಳನ್ನು ಉಲ್ಲಂಘಿಸಲಾಗುವುದಿಲ್ಲ ಎಂಬ ಬಗ್ಗೆ ಹೆಚ್ಚಿನ ವಿಶ್ವಾಸಾರ್ಹ ಭರವಸೆಗಳನ್ನು ನೀಡಲು ನ್ಯಾಯಾಧೀಶರು ಭಾರತಕ್ಕೆ 42 ದಿನಗಳ ಅವಕಾಶ ಒದಗಿಸಿದ್ದಾರೆ.
ಹಿಂಸೆ ನೀಡುವುದು ಹಾಗೂ ಅಮಾನವೀಯವಾಗಿ ಮತ್ತು ಕೀಳಾಗಿ ನಡೆಸಿಕೊಳ್ಳುವುದನ್ನು ಈ ಯುರೋಪಿಯನ್ ಒಪ್ಪಂದ ನಿಷೇಧಿಸುತ್ತದೆ.







