ಮಡಿಕೇರಿ: ಕಾಡಾನೆ ದಾಳಿ; ವ್ಯಕ್ತಿ ಪ್ರಾಣಾಪಾಯದಿಂದ ಪಾರು
ಮಡಿಕೇರಿ, ಮೇ.5: ಒಂಟಿ ಸಲಗದ ಹಠಾತ್ ದಾಳಿಯಿಂದ ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸುಂಟಿಕೊಪ್ಪ ಸಮೀಪದ ಹೇರೂರಿನಲ್ಲಿ ನಡೆದಿದೆ. ಮೂಲತಃ ಗರಗಂದೂರು ನಿವಾಸಿ ಎ.ಎನ್.ಇಬ್ರಾಹಿಂ ಎಂಬುವವರೇ ಕಾಡಾನೆ ದಾಳಿಯಿಂದ ಪಾರಾದ ವ್ಯಕ್ತಿಯಾಗಿದ್ದು, ಬಿದ್ದು ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹೇರೂರುವಿನ ಮೋದೂರು ಎಸ್ಟೇಟ್‍ನಲ್ಲಿ ಕಾರ್ಮಿಕರ ಮೇಸ್ತ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇಬ್ರಾಹಿಂ, ಮೇ 5 ರ ಬೆಳಗ್ಗಿನ 7 ಗಂಟೆ ಸಮಯದಲ್ಲಿ ತಮ್ಮ ಬೈಕಿನಲ್ಲಿ ಮೋದೂರು ಎಸ್ಟೇಟ್‍ಗೆ ತೆರಳುತ್ತಿದ್ದರು. ಈ ಸಂದರ್ಭ ಎಸ್ಟೇಟ್ ರಸ್ತೆಯಲ್ಲಿ ಎದುರಾದ ಬೃಹತ್ ಗಾತ್ರದ ಒಂಟಿ ಸಲಗ ಇಬ್ರಾಹಿಂ ಅವರ ಮೇಲೆ ದಾಳಿಗೆ ಮುಂದಾದಾಗ ಇಬ್ರಾಹಿಂ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕಾಡಾನೆ ಅಟ್ಟಾಡಿಸಿದ ಸಂದರ್ಭ ಓಡುವ ರಭಸದಲ್ಲಿ ಇಬ್ರಾಹಿಂ ಬಿದ್ದು ಗಾಯಗೊಂಡಿದ್ದು, ಒಂಟಿ ಸಲಗ ಬೈಕ್ ಅನ್ನು ಸಂಪೂರ್ಣ ಜಖಂಗೊಳಿಸಿದೆ.
ವಿಷಯ ತಿಳಿದು ಜಿಲ್ಲಾಸ್ಪತ್ರೆಗೆ ಆಗಮಿಸಿದ ಡಿಎಫ್‍ಓ ಮಂಜುನಾಥ್ ಅವರ ವಿರುದ್ಧ ತೋಟದ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಡಿಎಫ್‍ಓ ಮಂಜುನಾಥ್, ಮಡಿಕೇರಿಯ ಮೂರು ಮತ್ತು ವೀರಾಜಪೇಟೆಯಲ್ಲಿ ಉಪಟಳ ಮಾಡುತ್ತಿರುವ ಮೂರು ಕಾಡಾನೆಗಳನ್ನು ಹಿಡಿದು ಜಿಲ್ಲೆಯ ಆನೆ ಶಿಬಿರಗಳಲ್ಲಿ ಪಳಗಿಸಲಾಗುತ್ತದೆ ಎಂದು ಭರವಸೆ ನೀಡಿದರು.





