ನಿಮ್ಮ ಕಿವಿಗಳು ಬಂದ್ ಆಗಿವೆಯೇ...? ತೆರೆಯಲು ಉಪಾಯಗಳಿಲ್ಲಿವೆ
ದೀರ್ಘಾವಧಿಯ ವಿಮಾನ ಪ್ರಯಾಣದ ನಂತರ ಕೆಳಗಿಳಿದಾಗ ನಮ್ಮ ಕಿವಿಗಳು ಬಂದ್ ಆಗಿರುವುದು ಅಥವಾ ಮುಚ್ಚಿಕೊಂಡಿರುವುದು ಅನುಭವಕ್ಕೆ ಬರುತ್ತದೆ. ನಮ್ಮ ದೈನಂದಿನ ಜೀವನದಲ್ಲಿಯೂ ಆಗಾಗ್ಗೆ ಕಿವಿಗಳು ಬಂದ್ ಆಗಿರುತ್ತವೆ.
ಕಿವಿ ಸರಿಯಾಗಿ ಕೇಳಿಸದಿರುವುದು, ಸಾಧಾರಣದಿಂದ ತೀವ್ರ ಕಿವಿನೋವು, ಕಿವಿಯಲ್ಲಿ ಸದಾ ಮೊರೆತ,ಕಿವಿಗಳಲ್ಲಿ ತುಂಬ ಹೊತ್ತು ತುರಿಕೆ,ತಲೆ ಸುತ್ತಿದಂತೆ ಅಥವಾ ಭಾರವಾದಂತೆ ಅನ್ನಿಸುವುದು,ಒಂದು ಅಥವಾ ಎರಡೂ ಕಿವಿಗಳಲ್ಲಿ ಸೋರಿಕೆ,ಗಂಭೀರ ಪ್ರಕರಣಗಳಲ್ಲಿ ರಕ್ತ ಸೋರಿಕೆ,ಕಿವಿಯಲ್ಲಿ ಏನೋ ದ್ರವ ಹರಿದಾಡಿದಂತೆ ಅನುಭವ ಇವೆಲ್ಲ ಕಿವಿಗಳು ಬಂದ್ ಆಗಿರುವುದರ ಲಕ್ಷಣಗಳಾಗಿವೆ.
ಕಿವಿಗಳಲ್ಲಿ ಅತಿಯಾಗಿ ಗುಗ್ಗೆ ತುಂಬಿಕೊಂಡಿರುವುದು, ಕಿವಿಯಲ್ಲಿ ನೀರು ಸೇರುವಿಕೆ, ನಾವಿರುವ ಎತ್ತರದಲ್ಲಿ ಬದಲಾವಣೆ, ಸೈನಸ್ ಸೋಂಕು, ಮಧ್ಯಕಿವಿಯ ಸೋಂಕುಗಳು, ಉರಿಯೂತ ಮತ್ತು ಅಲರ್ಜಿ ಇತ್ಯಾದಿಗಳು ಕಿವಿಗಳು ಬಂದ್ ಆಗಲು ಕಾರಣಗಳಾಗಿವೆ.
ಬಂದ್ ಆಗಿರುವ ಕಿವಿಗಳನ್ನು ತೆರೆಯಲು ಸರಳ ಉಪಾಯಗಳು:
► ತೇವಗೊಳಿಸುವಿಕೆ
ಹವಾಮಾನದಿಂದಾಗಿ ಸೈನಸ್ ಒಣಗುವುದನ್ನು ತಡೆಯಲು ಅವುಗಳನ್ನು ತೇವಗೊಳಿಸುವುದು ಒಂದು ಒಳ್ಳೆಯ ಉಪಾಯ ವಾಗಿದೆ. ಬಿಸಿನೀರಿಗೆ ಟೀ ಟ್ರೀ ತೈಲ ಅಥವಾ ಇತರ ಯಾವುದೇ ನೈಸರ್ಗಿಕ ಎಸೆನ್ಶಿಯಲ್ ಆಯಿಲ್ನ 5-6 ಹನಿಗಳನ್ನು ಸೇರಿಸಿ ಅದರ ಹಬೆಯನ್ನು ಮೂಗಿನ ಮೂಲಕ ಒಳಗೆಳೆದುಕೊಳ್ಳುವುದರಿಂದ ಸೈನಸ್ಗಳು ತೇವಗೊಳ್ಳುತ್ತವೆ.
► ನೇಸಲ್ ಡ್ರಾಪ್ ಬಳಕೆ
ಲವಣಯುಕ್ತ ನೇಸಲ್ ಸ್ಪ್ರೇ ಅಥವಾ ನೇಸಲ್ ಡ್ರಾಪ್ಗಳನ್ನು ಬಳಸುವುದರಿಂದ ಕಟ್ಟಿಕೊಂಡಿರುವ ಮೂಗು ಮತ್ತು ಕಿವಿಗಳ ಮಾರ್ಗಗಳು ತೆರೆದುಕೊಳ್ಳುತ್ತವೆ.
► ಉಸಿರು ಹೊರದಬ್ಬುವಿಕೆ
ಇದು ಮೂಗಿನ ಮತ್ತು ಶ್ರವಣೇಂದ್ರಿಯದ ಮಾರ್ಗಗಳನ್ನು ತೆರೆಯಲು ನೆರವಾಗುತ್ತದೆ. ಬಾಯಿಯನ್ನು ಮುಚ್ಚಿಕೊಂಡು ಮೂಗಿನ ಹೊರಳೆಗಳನ್ನು ಒತ್ತಿ ಹಿಡಿದುಕೊಂಡು ಮೆಲ್ಲಗೆ ಉಸಿರನ್ನು ಹೊರಗೆ ತಳ್ಳುವುದರಿಂದ ಮಧ್ಯಕಿವಿ ಮತ್ತು ಎದೆಯ ಮೇಲೆ ಒತ್ತಡ ಹೆಚ್ಚುತ್ತದೆ ಮತ್ತು ಕಿವಿಯು ತೆರೆದುಕೊಳ್ಳುತ್ತದೆ.
► ಶಾಖ ಚಿಕಿತ್ಸೆ
ಒಣ ಅಥವಾ ಹಸಿ ಬಟ್ಟೆಯನ್ನು ಬಿಸಿ ಮಾಡಿಕೊಂಡು ಪೀಡಿತ ಕಿವಿಯ ಬುಡದಲ್ಲಿ ಶಾಖ ನೀಡಿದರೆ ಮುಚ್ಚಿಕೊಂಡಿರುವ ಕಿವಿಯು ತೆರೆದುಕೊಳ್ಳುತ್ತದೆ.
► ಟಾಯ್ನಬೀ ಮ್ಯಾನ್ಯೂವರ್
ಈ ವಿಧಾನದಲ್ಲಿ ಬಾಯಿಯನ್ನು ಮುಚ್ಚಿಕೊಂಡು ಮೂಗಿನ ಹೊರಳೆಗಳನ್ನು ಬೆರಳುಗಳಿಂದ ಒತ್ತಿ ಹಿಡಿದು ಹಲವಾರು ಬಾರಿ ನುಂಗಬೇಕಾಗುತ್ತದೆ. ಮೂಗಿನ ಹೊರಳೆಗಳು ಮುಚ್ಚಿರುವುದರಿಂದ ನಾಲಿಗೆಯ ಚಲನೆಯು ಕಿವಿಗಳ ನಾಳಗಳ ಮೂಲಕ ಹೋಗುವ ಗಾಳಿಯನ್ನು ಸಂಕುಚಿತಗೊಳಿಸುತ್ತದೆ ಮತ್ತು ಅದರಲ್ಲಿ ಸಮ ಒತ್ತಡವಿರುವಂತೆ ಮಾಡುತ್ತದೆ. ಇದರಿಂದಾಗಿ ಮುಚ್ಚಿಕೊಂಡಿರುವ ಕಿವಿಯು ತೆರೆದುಕೊಳ್ಳುತ್ತದೆ.
► ದವಡೆಯ ಚಲನೆ
ಬಾಯಿಯನ್ನು ತೆರೆದಿಟ್ಟುಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ದವಡೆಗಳ ವೇಗವಾದ ಚಲನೆಯನ್ನು ಈ ವಿಧಾನವು ಒಳಗೊಂಡಿದೆ. ಕಿವಿಯು ತೆರೆದುಕೊಂಡ ಶಬ್ದ ಕೇಳುವವರೆಗೆ ಹೀಗೆ ಮಾಡುತ್ತಿರಬೇಕು.
► ಒಟೊವೆಂಟ್ ಬಲೂನ್ ನೆರವು
ಮುಚ್ಚಿಕೊಂಡಿರುವ ಕಿವಿಯನ್ನು ತೆರೆಯಲು ನೆರವಾಗುವ ಒಟೊವೆಂಟ್ ಬಲೂನ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಲ್ಲದಿದ್ದರೆ ಸಣ್ಣ ಸಾದಾ ಬಲೂನ್ ಇದ್ದರೂ ಸಾಕು. ಮೂಗಿನ ಒಂದು ಹೊರಳೆಯನ್ನು ಮುಚ್ಚಿಕೊಂಡು ಇನ್ನೊಂದು ಹೊರಳೆಗೆ ಬಲೂನ್ ಹಿಡಿದುಕೊಂಡು ಉಸಿರನ್ನು ಹೊರಗೆ ತಳ್ಳುವುದರಿಂದ ಮಧ್ಯಕಿವಿ ಮತ್ತು ಎದೆಯ ಮೇಲಿನ ಒತ್ತಡ ಹೆಚ್ಚುತ್ತದೆ. ಬಲೂನ್ ಸಂಪೂರ್ಣವಾಗಿ ಉಬ್ಬುವವರೆಗೂ ಇದನ್ನು ಮುಂದುವರಿಸಬೇಕು, ಬಳಿಕ ಇನ್ನೊಂದು ಹೊರಳೆಯೊಂದಿಗೂ ಇದೇ ರೀತಿ ಮಾಡಿದರೆ ಕಿವಿಯು ತೆರೆದುಕೊಳ್ಳುತ್ತದೆ.
► ಕುಪ್ಪಳಿಸುವಿಕೆ
ಇದು ಸ್ನಾನ ಮಾಡುವಾಗ ಅಥವಾ ಈಜಾಡುವಾಗ ಕಿವಿಯೊಳಗೆ ಸೇರಿಕೊಂಡಿರುವ ನೀರನ್ನು ಹೊರಹಾಕಲು ಪರಿಣಾಮಕಾರಿ ವಿಧಾನವಾಗಿದೆ. ಕಾಲಿನ ಮೇಲೆ ಕುಪ್ಪಳಿಸುವುದರಿಂದ ಗುರುತ್ವಾಕರ್ಷಣ ಶಕ್ತಿಯ ಪರಿಣಾಮದಿಂದಾಗಿ ನೀರು ಹೊರಕ್ಕೆ ಹೋಗುತ್ತದೆ. ತಲೆಯನ್ನು ಮುಚ್ಚಿಕೊಂಡಿರುವ ಕಿವಿಯ ಬದಿಗೆ ವಾಲಿಸಿ ಮತ್ತು ಆ ಬದಿಯ ಕಾಲಿನಲ್ಲಿ ನಿಂತುಕೊಂಡು ನೀರು ಕಿವಿಯಿಂದ ಹೊರಹೋಗುವವರೆಗೆ ಕುಪ್ಪಳಿಸುತ್ತಿರಿ. ಈ ವಿಧಾನವು ತಕ್ಷಣದ ಪರಿಹಾರ ನೀಡುತ್ತದೆ.
► ಚ್ಯೂಯಿಂಗಮ್ ಜಗಿಯುವಿಕೆ,ಆಕಳಿಕೆ ಮತ್ತು ನುಂಗುವಿಕೆ
ನಾವಿರುವ ಎತ್ತರದಲ್ಲಿ ಬದಲಾವಣೆಯ(ಉದಾ:ವಿಮಾನ ಪ್ರಯಾಣ) ಪರಿಣಾಮವಾಗಿ ಕಿವಿಯು ಬಂದ್ ಆಗಿರುವ ಸಂದರ್ಭದಲ್ಲಿ ಅದನ್ನು ತೆರೆಯಲು ಇವು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಉಪಾಯಗಳಾಗಿವೆ.
► ಉಪ್ಪುನೀರಿನಿಂದ ಮುಕ್ಕಳಿಸುವಿಕೆ
ಇದು ವಿಶೇಷವಾಗಿ ಸೈನಸ್ ಸೋಂಕು ಅಥವಾ ಫ್ಲೂದಿಂದಾಗಿ ಕಟ್ಟಿಕೊಂಡಿರುವ ಮೂಗು ಮತ್ತು ಕಿವಿಗಳನ್ನು ತೆರೆಯಲು ಅತ್ಯಂತ ಸಾಮಾನ್ಯ ಸಾಂಪ್ರದಾಯಿಕ ವಿಧಾನಗಳಲ್ಲೊಂದಾಗಿದೆ. ಒಂದು ಚಮಚ ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು ಈ ಸರಳ ಉಪಾಯವಾಗಿದೆ.