ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು: ಮುನೀರ್ ಕಾಟಿಪಳ್ಳ

ಮಂಗಳೂರು,ಮೇ.6: ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು” ಎಂದು ಮಂಗಳೂರು ಉತ್ತರವಿಧಾನ ಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ. ಅವರು ಅಡ್ಡೂರಿನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ಇಲ್ಲಿನ ಜನಪ್ರತಿನಿಧಿಗಳಿಗೆ ಜನಸಮುದಾಯದ ಕಷ್ಟಕಾರ್ಪಣ್ಯಗಳು ಬೇಡವಾಗಿದ್ದು, ಕೇವಲ ಧರ್ಮಗಳ ಆಧಾರದಲ್ಲಿ ಮತಯಾಚಿಸುತ್ತಿದ್ದಾರೆ. ಈ ಬಾರಿಯ ಚುನಾವಣೆ ಧರ್ಮಗಳ ಮಧ್ಯೆ ನಡೆಯುವಸಂಘರ್ಷ ಅಲ್ಲ. ಬದಲಾಗಿ 90% ಬಡವರ ಹಾಗೂ 10% ಇರುವ ಶ್ರೀಮಂತರ ನಡುವಿನ ಸಂಘರ್ಷ ಆಗಿದೆ” ಎಂದು ಅವರು ಹೇಳಿದರು.
“ಬಿಜೆಪಿಯ ಕೋಮುವಾದವನ್ನು ಸೋಲಿಸಲು ಕಮ್ಯುನಿಸ್ಟ್ ಸೇರಿದಂತೆ ಇತರ ಪಕ್ಷಗಳು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸದಂತೆ ಒತ್ತಡ ಹೇರಲಾಗಿದೆ. ಒಂದು ವೇಳೆ ಕಾಂಗ್ರೆಸ್ ಗೆ ಸೀಟ್ ಸಿಗದಿದ್ದ ವೇಳೆ ಅದು ಬಿಜೆಪಿಯಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಪ್ರಯೋಜನವೇನು?” ಎಂದು ಅವರು ಪ್ರಶ್ನಿಸಿದರು.
ಮುಸ್ಲಿಮ್ ಮೌಲವಿ ಗಫೂರ್ ರನ್ನು ಹತ್ಯೆಗೈದ ಕೊಲೆಗಡುಕರನ್ನು ಪಕ್ಷಕ್ಕೆ ಸೇರ್ಪಡಿಸಿದ ಮೊಯ್ದಿನ್ ಬಾವಾ ಅವರ ನಡೆಯ ವಿರುದ್ಧ ಹರಿಹಾಯ್ದ ಮುನೀರ್ ಕಾಟಿಪಳ್ಳ, “ಅಮಾಯಕ ಕಬೀರ್ ಮೇಲೆ ಎನ್ಕೌಂಟರ್ ನಡೆಸಿದ ಎಎನ್‍ಎಫ್ ಸಿಬ್ಬಂದಿಯ ಅಮಾನತು ವಾಪಸ್ ಪಡೆದು ಪ್ರಕರಣವನ್ನು ಮುಚ್ಚಿಹಾಕುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಮೊಯ್ದಿನ್ ಬಾವಾ ಚಕಾರ ಎತ್ತಿಲ್ಲವೇಕೆ” ಎಂದು ಪ್ರಶ್ನಿಸಿದರು.
“ಈ ಭಾಗದ ಯುವಕರಿಗೆ ಎಂಆರ್ ಪಿಎಲ್ ಕಂಪೆನಿಗಳಲ್ಲಿ ಉದ್ಯೋಗ ಕಲ್ಪಿಸುವ ಬದ್ಧತೆ ಇರದ ಮೊಯ್ದಿನ್ ಬಾವಾ ಅವರು ಸೌದಿ ಅರೇಬಿಯಾದಲ್ಲಿ ಸಭೆ ನಡೆಸಿ ತನಗೆ ವೋಟು ಹಾಕುವಂತೆ ಯುವಕರಲ್ಲಿ ಬಹಿರಂಗವಾಗಿ ವಿನಂತಿಸುತ್ತಿದ್ದಾರೆ. ಇವರಿಗೆ ವೋಟಿನ ಚಿಂತೆ ನಮಗೆ ಯುವಕರ ಬದುಕಿನ ಚಿಂತೆ” ಎಂದು ಮುನೀರ್ ಕಾಟಿಪಳ್ಳ ಬಾವಾರನ್ನು ತರಾಟೆಗೆ ತೆಗೆದುಕೊಂಡರು.
“ದೇಶದಲ್ಲಿ ಒಂದು ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ ನರೇಂದ್ರ ಮೋದಿಯವರು ಇಂದು ಯುವಕರಿಗೆ ಹತಾಶೆ ಮೂಡಿಸಿ ವಂಚಿಸಿದ್ದಲ್ಲದೆ, ನೋಟ್ ಬ್ಯಾನ್ ಮೂಲಕ ಬಡವರನ್ನು ಕೊಂದಿದ್ದಾರೆ” ಎಂದು ಆರೋಪಿಸಿದ ಅವರು “ರಾಷ್ಟ್ರೀಯ ಪಕ್ಷಗಳ ಅಧಃಪತನದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತಗೊಂಡಿದ್ದು, ಇದರಿಂದ ಸರಕಾರಿ ಶಿಕ್ಷಣ ಸಂಸ್ಥೆ, ಸರಕಾರಿ ಆಸ್ಪತ್ರೆಗಳು ಸೇರಿ ಹಲವಾರು ಮೂಲಭೂತ ಸೌಕರ್ಯಗಳು ನಿರ್ಮಾಣವಾಗಿಲ್ಲ. ಆದ್ದರಿಂದ ತೃತೀಯ ಶಕ್ತಿಯಾಗಿರುವ ಕಮ್ಯುನಿಸ್ಟ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ತನ್ನನ್ನು ಗೆಲ್ಲಿಸಬೇಕು”ಎಂದು ವಿನಂತಿಸಿದರು.
ಎನ್ .ಇ.ಮೊಹಮ್ಮದ್, ಆನಂದ್ ಬಂಗೇರಾ, ಗಂಗಯ್ಯ ಅಮೀನ್, ಜಿ.ಎ.ಮೊಹಮ್ಮದ್, ಬಿ.ಕೆ.ಇಮ್ತಿಯಾಜ್, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ಅಬ್ದುಲ್ ರಹಿಮಾನ್ ಗೋಳಿಪಡ್ಪು, ಹನೀಫ್, ಮನೋಜ್ ವಾಮಂಜೂರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.







