ಇದು ಅಭಿವೃದ್ಧಿ ಮತ್ತು ಅಭಿವೃದ್ಧಿ ವಿರೋಧಿಗಳ ನಡುವಿನ ಚುನಾವಣೆ: ಪ್ರಧಾನಿ ಮೋದಿ

ರಾಯಚೂರು, ಮೇ 6: ಎಲ್ಲರೊಂದಿಗೆ ಸೇರಿ ಅಭಿವೃದ್ಧಿಗೆ ಬದ್ಧವಾಗಿರುವ ಬಿಜೆಪಿ ಒಂದು ಕಡೆ, ಸಮಾಜವನ್ನು ಒಡೆಯುವ ಮೂಲಕ ಅಭಿವೃದ್ಧಿಯನ್ನು ವಿರೋಧಿಸುವ ಕಾಂಗ್ರೆಸ್ ಮತ್ತೊಂದು ಕಡೆ. ಈ ಎರಡರ ನಡುವಿನ ಚುನಾವಣಾ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳೇನೂ ಮಾಡದ ಕಾಂಗ್ರೆಸ್ ಇದೀಗ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಉತ್ತರ ಹೇಳಬೇಕೋ ಬೇಡವೋ? ಎಂದು ಪ್ರಶ್ನಿಸಿದರು.
ರಾಯಚೂರಿನ ಉರಿಬಿಸಿಲಿನಲ್ಲಿ ನಿಂತಿರುವ ನೀವು ಎಸಿ ಕೊಠಡಿಗಳಲ್ಲಿ ಕುಳಿತು ಅತಂತ್ರ ವಿಧಾನಸಭೆ ಎಂದು ಮಾತನಾಡುವವರಿಗೆ ಉತ್ತರಕೊಡ್ತಿದ್ದೀರಿ ಎಂದ ಅವರು, ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಭಾಷೆಯ ತಡೆ ಇಲ್ಲ. ಒಂದು ಭಾರತ, ಶ್ರೇಷ್ಠ ಭಾರತ. ನಿಮ್ಮ ಪ್ರೀತಿ ಇದನ್ನು ತೋರಿಸುತ್ತಿದೆ ಎಂದರು.
ನೀವು ನನ್ನ ಮಾಲಕರು, ನೀವು ಆಜ್ಞೆ ಮಾಡಿದಿರಿ, ನಾನು ಶಿರಸಾವಹಿಸಿದೆ. ರಾಯಚೂರು ಹರಿದಾಸರು ಮತ್ತು ವಚನಕಾರರ ಭೂಮಿ. ಅನೇಕ ಸಾಂಸ್ಕೃತಿಕ ಪರಂಪರೆಗಳು ಬೆಳಗಿವೆ. ಇಷ್ಟಾದರೂ ಕಾಂಗ್ರೆಸ್ ಇಲ್ಲಿಂದ ಏನನ್ನೂ ಕಲಿತಿಲ್ಲ. ಈಗ ಕರ್ನಾಟಕ ಅನೇಕರ ಬಲಿದಾನಗಳಿಂದ ಈ ಸ್ಥಿತಿಗೆ ತಲುಪಿದೆ. ಈ ಚುನಾವಣೆ ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಹಗಲು-ರಾತ್ರಿ ಮೋದಿ ಮೋದಿ ಎನ್ನುತ್ತಿದೆ. ಮೋದಿಗೆ ಬೈಯುವುದೇ ಅವರ ಕಾರ್ಯತಂತ್ರ. ಕಾಂಗ್ರೆಸ್‌ಗೆ ವಿದಾಯ ಹೇಳಲು ಇದು ಸುಸಂದರ್ಭ. ದೇಶದ ಜನರು ವಿದಾಯ ಹೇಳಿದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ರಾಜ್ಯದಲ್ಲಿಯೂ ಇವರನ್ನು ಮನೆಗೆ ಕಳುಹಿಸಿ, ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
‘ರಾಜ್ಯ ಸರಕಾರದ ‘ಅನ್ನಭಾಗ್ಯ’ ಯೋಜನೆಯಲ್ಲಿಯೂ ಕೇಂದ್ರ ಸರಕಾರದ ಪಾಲಿದೆ. ಆದರೆ, ಕಾಂಗ್ರೆಸ್ ಇದನ್ನು ಮುಚ್ಚಿಟ್ಟಿದೆ. ನನ್ನ ಸರಕಾರ ಬಡವರ ಕಲ್ಯಾಣಕ್ಕೆ ಸಮರ್ಪಿತ. ಬಡವರ ಹೊಟ್ಟೆ ತುಂಬಿಸುವುದು ನಮ್ಮ ಉದ್ದೇಶ. ಸಾವಿರಾರು ಕೋಟಿ ರೂ.ಗಳನ್ನು ಬಡವರ ಹೊಟ್ಟೆ ತುಂಬಿಸಲು ಬಳಸುತ್ತಿದೆ’
-ನರೇಂದ್ರ ಮೋದಿ ಪ್ರಧಾನಿ







