"ಕಾಂಗ್ರೆಸಿಗರು ‘ಮುಧೋಳ ಶ್ವಾನ’ಗಳಿಂದಲೂ ಪಾಠ ಕಲಿಯುವ ವಿಶ್ವಾಸವಿಲ್ಲ"
ಪ್ರಧಾನಿ ಮೋದಿಯಿಂದ ಅವಹೇಳನ

ಬಾಗಲಕೋಟೆ, ಮೇ 6: ‘ಕಾಂಗ್ರೆಸಿಗರೇ, ನಿಮ್ಮ ಪೂರ್ವಜರಿಂದ ಏನಾದರೂ ಕಲಿಯುವುದು ಬೇಡ. ಕನಿಷ್ಟ ಬಾಗಲಕೋಟೆಯ ಮುಧೋಳ ಶ್ವಾನಗಳಿಂದಲಾದರೂ ಏನಾದರೂ ಕಲಿತುಕೊಳ್ಳಿ. ಅವರು ಅವುಗಳಿಂದಲೂ ಪಾಠ ಕಲಿಯುವ ವಿಶ್ವಾಸವಿಲ್ಲ’ ಎಂದು ಪ್ರಧಾನಿ ಮೋದಿ ಅವಹೇಳನ ಮಾಡಿದ್ದಾರೆ.
ರವಿವಾರ ಜಮಖಂಡಿಯಲ್ಲಿ ಬಿಜೆಪಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಇಲ್ಲಿನ ಬೇಡರು. ನಾವು ಹೇಗೆ ಬದುಕಬೇಕೆಂದು ಅವರು ಬದುಕಿ ತೋರಿಸಿದರು. ಹಲಗಲಿ ಬೇಡರು ನಮಗೆ ಮಾದರಿ ಎಂದು ಬಣ್ಣಿಸಿದರು.
ದೇಶಭಕ್ತಿಯ ಬಗ್ಗೆ ಚರ್ಚೆ ಆರಂಭವಾದಾಗ, ವಂದೇ ಮಾತರಂ ಬಗ್ಗೆ ಚರ್ಚೆ ಶುರುವಾದರೆ ಕೆಲವರಿಗೆ ಕಷ್ಟವಾಗುತ್ತದೆ. ದೇಶಭಕ್ತಿಯಿಂದಲೇ ನಮಗೆ ಸ್ವಾತಂತ್ರ ಬಂದಿದ್ದು, ಇದೀಗ ಅದೇ ದೇಶಭಕ್ತಿಯಿಂದ ಅಭಿವೃದ್ಧಿ ಸಾಧಿಸಬೇಕು. ಆದರೆ, ಕಾಂಗ್ರೆಸ್‌ಗೆ ದೇಶಭಕ್ತಿ ಎಂದರೆ ಆಗುವುದಿಲ್ಲ ಎಂದು ಟೀಕಿಸಿದರು.
ಸಣ್ಣ ನೇಕಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಹಲವು ಯೋಜನೆ ಆರಂಭಿಸಿದೆ. ಯಂತ್ರಗಳ ಖರೀದಿಗೆ ಸುಲಭದ ಸಾಲ ಸಿಗುತ್ತೆ. ಪ್ರತ್ಯೇಕ ಮುದ್ರಾ ಯೋಜನೆ ಆರಂಭಿಸಿದ್ದೇವೆ ಎಂದ ಅವರು, ಇಳಕಲ್ ಸೀರೆಗೆ ವಿಶ್ವ ವ್ಯಾಪಿ ಮಾರುಕಟ್ಟೆ ಕಲ್ಪಿಸಲು ಆನ್‌ಲೈನ್ ಮಾರುಕಟ್ಟೆಗೂ ಅವಕಾಶ ಕಲ್ಪಿಸಿದ್ದೇವೆ ಎಂದರು.







