ಪ್ರಧಾನಿ ಮೋದಿಗೆ ಮಹಿಳೆ-ದಲಿತರ ಕುರಿತು ಸಂವೇದನೆಯಿಲ್ಲ: ಮೀರಾ ಕುಮಾರ್

ಬೆಂಗಳೂರು, ಮೇ 6: ಪ್ರಧಾನಿ ಮೋದಿಗೆ ಮಹಿಳೆ ಹಾಗೂ ದಲಿತರ ಬಗ್ಗೆ ಕಿಂಚಿತ್ತೂ ಸಂವೇದನೆಯಿಲ್ಲ. ಹೀಗಾಗಿಯೆ ದೇಶಾದ್ಯಂತ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಬಾಯಿ ಬಿಡುತ್ತಿಲ್ಲ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ವಿಷಾಧ ವ್ಯಕ್ತಪಡಿಸಿದ್ದಾರೆ.
ರವಿವಾರ ಕೆಪಿಸಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೆ ವ್ಯಕ್ತಿಗೆ ಸಂವೇದನೆ ಇದ್ದರೆ, ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳಿಗೆ ಕೂಡಲೆ ಪ್ರತಿಕ್ರಿಯಿಸುತ್ತಾರೆ. ಅಂತಹದರಲ್ಲಿ ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ತುಟಿ ಬಿಚ್ಚುತ್ತಿಲ್ಲ. ಅಷ್ಟರ ಮಟ್ಟಿಗೆ ಅವರು ಸಂವೇದನಾ ಹೀನರಾಗಿದ್ದಾರೆ ಎಂದು ಆರೋಪಿಸಿದರು.
ಜಮ್ಮು-ಕಾಶ್ಮಿರದ ಕಥುವಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ ದಲಿತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಪ್ರಪಂಚದಾದ್ಯಂತ ಪ್ರತಿಭಟನೆಗಳು ನಡೆದು, ಆಕ್ರೋಶ ವ್ಯಕ್ತವಾಗಿದೆ. ಆದರೆ, ಪ್ರಧಾನಿ ಮೋದಿ ಮಾತ್ರ ಪ್ರತಿಕ್ರಿಯಿಸದಿರುವುದು ಅನುಮಾನ ಮೂಡಿಸಿದೆ ಎಂದು ಅವರು ತಿಳಿಸಿದರು.
ಭಾರತವು ಹಲವು ಧರ್ಮ, ನೂರಾರು ಭಾಷೆಗಳನ್ನು ಹೊಂದಿದ್ದು, ಸಹಬಾಳ್ವೆಯಿಂದ ಜೀವನ ನಡೆಸಿಕೊಂಡು ಹೋಗಲಾಗುತ್ತಿದೆ. ಕಾಂಗ್ರೆಸ್ ಬಹುಸಂಸ್ಕೃತಿಯನ್ನು ಸಂರಕ್ಷಿಸುವ ಜಾತ್ಯತೀಯ ಸಿದ್ಧಾಂತದಡಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಬಿಜೆಪಿ ಮೂಲ ಸಿದ್ಧಾಂತ ಏಕ ಭಾಷೆ, ಧರ್ಮವನ್ನು ಸ್ಥಾಪಿಸುವಂತಹದ್ದಾಗಿದೆ. ಹೀಗಾಗಿ ಇವರೆಡು ಸಿದ್ಧಾಂತಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ಜನತೆ ನಿರ್ಧರಿಸಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಅಂದಿನ ರಾಜೀವ್ ಗಾಂಧಿ ಸರಕಾರ ಜಾರಿಗೆ ತಂದಿತು. ಆದರೆ, ಈ ಕಾಯ್ದೆ ಜಾರಿಯಲ್ಲಿ ಇದ್ದಾಗಲೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಈ ಬಗ್ಗೆ ಚಿಂತಿಸದ ಮೋದಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಬದಲಾಯಿಸಲು ಹೊರಟಿದೆ. ಆದರೂ ನಾವು ದಲಿತರ ಪರವಿದ್ದೇವೆ ಎಂದು ಕಣ್ಣೋರೆಸುವ ತಂತ್ರ ಮಾಡುತ್ತಾರೆ ಎಂದು ಅವರು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಸುಸ್ಥಿರ, ಸುಭದ್ರ ಸರಕಾರವನ್ನು ನೀಡಿದೆ. ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಈ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಬೇಕಾದರೆ ರಾಜ್ಯದ ಜನತೆ ಕಾಂಗ್ರೆಸ್‌ನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.







