‘ಆರೆಸ್ಸೆಸ್ ವಿಚಾರ ಹರಡುತ್ತಿರುವ ಪ್ರಧಾನಿ ಮೋದಿ’

ಬೆಂಗಳೂರು, ಮೇ.6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಎಲ್ಲೆಡೆ ಹರಡುವುದು ಕಾಂಗ್ರೆಸ್ ಉದ್ದೇಶವಾದರೆ, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಆರೆಸ್ಸೆಸ್ ವಿಚಾರಗಳನ್ನು ಹರಡುತ್ತಿದ್ದಾರೆಂದು ಎಐಸಿಸಿ ಎಸ್ಸಿ ಘಟಕದ ಅಧ್ಯಕ್ಷ ನಿತಿನ್ ರಾವತ್ ದೂರಿದರು.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ದಲಿತರ ಮೇಲೆ ಆಗುವ ಅತ್ಯಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.ಆದರೆ, ಸಂವಿಧಾನ ಬದಲಾಯಿಸುತ್ತೇವೆ ಎಂದು ಅವರ ಸಚಿವರೇ ಹೇಳಿಕೊಳ್ಳುತ್ತಾರೆ. ಬಿಜೆಪಿ ದಲಿತರ ಪರ ಏನನ್ನೂ ಮಾಡಿಲ್ಲ. ಈಗ ಚುನಾವಣೆ ಇದೆ ಎಂದು ದಲಿತರ ಬಗ್ಗೆ ಆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ದಲಿತರಿಗಾಗಿ ಯಾವುದೇ ಹೆಚ್ಚಿನ ಸೌಲಭ್ಯಗಳನ್ನು ನೀಡಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ದಲಿತ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಅನೇಕ ಹಣಕಾಸು ಸವಲತ್ತುಗಳನ್ನು ನೀಡಿದೆ ಎಂದು ನುಡಿದರು.
ದಲಿತರ ಮನೆಯಲ್ಲಿ ಬಿಜೆಪಿಯವರು ಇತ್ತೀಚೆಗೆ ಊಟ ಮಾಡುತ್ತಿದ್ದಾರೆ. ಇದೆಲ್ಲಾ ಚುನಾವಣಾ ಗಿಮಿಕ್ ಎಂದ ಅವರು, ದಲಿತರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಬಿಜೆಪಿಯವರು ಸೇವಿಸಲಿಲ್ಲ. ಹೋಟೆಲ್ ಆಹಾರ ಸೇವಿಸುವ ಮೂಲಕ ಬಿಜೆಪಿಯವರು ನಾಟಕ ಆಡುತ್ತಿದ್ದಾರೆ. ದಲಿತರ ಮನೆಗೆ ಊಟ ಮಾಡಲು ಹೋಗಿ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು







