ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಚಿವ ಎಚ್.ಕೆ.ಪಾಟೀಲ್
ಚುನಾವಣಾ ಪ್ರಚಾರ ಸಭೆಯಲ್ಲಿ ಸುಳ್ಳು ಭಾಷಣ ಆರೋಪ

ಗದಗ, ಮೇ 6: ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಗ್ರಾಮಿಣಾಭಿವೃದ್ಧಿ ಸಚಿವ ಹಾಗೂ ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಕ್ಕಾಗಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳು ಹೇಳುವ ಮೂಲಕ ಮತದಾರರನ್ನು ದಾರಿ ತಪ್ಪಿಸುವುದು ಸಲ್ಲ. ಹೀಗಾಗಿ ಐಪಿಸಿ ಮತ್ತು ಜನಪ್ರತಿನಿಧಿ ಕಾಯ್ದೆಯಡಿ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು.
ಸೋನಿಯಾ ಗಾಂಧಿ 2007ರಲ್ಲೇ ಮಹದಾಯಿ ಯೋಜನೆಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರಧಾನಿ ಮೋದಿಗೆ ಈ ಕುರಿತು ಕನಿಷ್ಠ ಮಾಹಿತಿಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, 2008ರಲ್ಲಿ ಬಿಎಸ್‌ವೈ ನೇತೃತ್ವದ ಸರಕಾರ ಮಹದಾಯಿ ವಿವಾದದ ಕುರಿತು ನ್ಯಾಯ ಮಂಡಳಿಗೆ ದೂರು ನೀಡಿತು. ಆದರೆ, ಮೋದಿಯವರು ವಾಸ್ತವಾಂಶವನ್ನು ಮರೆಮಾಚಿ, ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಪಡೆದುಕೊಂಡಿದ್ದೇ ಕಾಂಗ್ರೆಸ್ ಎಂದು ಹೇಳಿದರು.
ಮಹದಾಯಿ ವಿಷಯದಲ್ಲಿ ರಾಜಕೀಯ ನಾಟಕ ಮಾಡಲು ಹೋಗಿ ಯಡಿಯೂರಪ್ಪ ಈಗಾಗಲೇ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇದೀಗ ಪ್ರಧಾನಿ ಮೋದಿ ಅದೇ ಹಾದಿ ಹಿಡಿದಿದ್ದಾರೆ. ಇದರಿಂದ ಮೋದಿ ವ್ಯಕ್ತಿತ್ವ ಅನಾವರಣಗೊಂಡಿದೆ ಎಂದು ವ್ಯಂಗ್ಯವಾಡಿದರು.







