ಯಶಸ್ಸೆಂಬುದು ಆಯ್ಕೆ, ಅವಕಾಶವಲ್ಲ: ಎಂ.ಎಸ್ ಮೂಡಿತ್ತಾಯ
ತೋಡಾರು ಯನೆಪೊಯ ವಾರ್ಷಿಕೋತ್ಸವ

ಮೂಡುಬಿದಿರೆ, ಮೇ 6: ಭಾರತವು ಕೃಷಿ ಆಧಾರಿತ ಬಂಡವಾಳದಿಂದ ಕೈಗಾರಿಕ ಬಂಡವಾಳವಾಗಿ ಇದೀಗ ಬೌದ್ಧಿಕ ಬಂಡವಾಳದತ್ತ ಸಾಗುತ್ತಿದೆ. ಬೌದ್ಧಿಕತೆಯೆನ್ನುವುದು ಸೋಲು ರಹಿತವಾದ ಸಂಪತ್ತು ಹಾಗೂ ಇದನ್ನು ಪಡೆಯುವಲ್ಲಿ ಯುವ ಜನತೆ ಕೌಶಲ್ಯಯುಕ್ತರಾಗಿ ಯಶಸ್ಸಿನತ್ತ ಸಾಗಬೇಕು. ಯಶಸ್ಸೆಂಬುದು ಆಯ್ಕೆ ಹೊರತು ಅವಕಾಶವಲ್ಲ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರೊ. ವೈಸ್ ಚಾನ್ಸಲರ್ ಡಾ. ಎಂ.ಎಸ್ ಮೂಡಿತ್ತಾಯ ಹೇಳಿದರು.
ಅವರು ಯನೆಪೊಯ ತಾಂತ್ರಿಕ ವಿದ್ಯಾಲಯದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದಿನ ಯುವಜನತೆ ಭವಿಷ್ಯ ಭಾರತದ ಶಿಲ್ಪಿಗಳು, ವಿದ್ಯಾರ್ಥಿಗಳು ಯಶಸ್ಸನು ಸುಸ್ಥಿರಗೊಳಿಸುವತ್ತ ಧಾವಿಸಬೇಕು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿಮ್ಮ ಮನಸ್ಸನ್ನು ಅರಳಿಸಲಿ ಎಂದು ಶುಭ ಹಾರೈಸಿದರು.
ಯನೆಪೊಯ ಮಹಾವಿದ್ಯಾಲಯದ ಚಾನ್ಸಲರ್ ಯನೆಪೊಯ ಅಬ್ದುಲ್ಲಾ ಕುಂಞಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ಆರ್. ಜಿ ಡಿಸೋಜ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಮುಹಮ್ಮದ್ ಯೂಸುಬ್ ಬುಲ್‌ಬುಲೆಗೆ "ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಯನೆಪೊಯ ಗ್ರೂಪ್ ನ ಯನೆಪೊಯ ಅಬ್ದುಲ್ಲಾ ಜಾವೇದ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಾಜಿನ್ ಕಿರಾತ್ ಪಠಿಸಿದರು. ಉಪನ್ಯಾಸಕ ಡಾ.ನಾಗರಾಜ್ ಪಿ ಸ್ವಾಗತಿಸಿದರು, ಉಪನ್ಯಾಸಕಿ ಶ್ವೇತಾ ಅನಿರುದ್ಧ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







