ಸ್ವಾರ್ಥಕ್ಕಾಗಿ ರಚಿತವಾಗುವ ಕಾನೂನುಗಳಿಂದ ನೈತಿಕ ಅಧಃಪತನ: ವಕೀಲ ಶಂಕರಪ್ಪ
ಬೆಂಗಳೂರು, ಮೇ 6: ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ವ್ಯಕ್ತಿಗತ ಸ್ವಾರ್ಥಸಾಧನೆಗಾಗಿ ರಚಿತವಾಗುವ ಕಾನೂನುಗಳಿಂದಾಗಿ ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ ಎಂದು ಜನಪಂಥ ಸಂಘದ ಅಧ್ಯಕ್ಷ ಮತ್ತು ವಕೀಲ ಶಂಕರಪ್ಪ ಹೇಳಿದ್ದಾರೆ.
ರವಿವಾರ ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಕಾನೂನುಗಳಿಂದ ಆಗುವ ಅನಾಹುತ’ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಪಕ್ಷಗಳು ವಿಪರೀತ ಪ್ರಮಾಣದಲ್ಲಿ ಭರವಸೆ ನೀಡುತ್ತಿದ್ದಾರೆ. ಎಡಪಂಥೀಯ ಮತ್ತು ಬಲಪಂಥೀಯ ಧ್ಯೇಯ ಸಿದ್ದಾಂತಗಳಿಗೆ ಅನುಗುಣವಾಗಿ ಹೊಸ ಕಾನೂನುಗಳನ್ನು ಹಿಂದೆಮುಂದೆ ನೋಡದೆಯೇ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಇದರಿಂದ ಮುಂಬರುವ ದಿನಗಳಲ್ಲಿ ವ್ಯವಸ್ಥೆ ಮೇಲಾಗುವ ದುಷ್ಪರಿಣಾಮದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು.
ಪದೇಪದೇ ಹೊಸ ಕಾನೂನುಗಳ ರಚನೆಯಿಂದಾಗಿ ಶಾಸಕಾಂಗ-ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಕಂದಕ ಸೃಷ್ಟಿಯಾಗಲಿದೆ. ಆಡಳಿತಶಾಹಿ ಬಲಗೊಂಡು ಸವಾರಿ ನಡೆಸಲಿದೆ. ಇದಕ್ಕೆ ಅಂತಿಮವಾಗಿ ಬಲಿ ಆಗುವವರು ಸಾಮಾನ್ಯ ಜನರು. ಈಗಲೂ ಜಾರಿಯಲ್ಲಿರುವ ಪೋಕ್ಸೋ, ನಿರ್ಭಯಾ, ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿರುವುದು ಮಧ್ಯಮ ಮತ್ತು ಬಡ ಜನತೆಯ ಮೇಲೆಯೇ ಹೊರತು ಶ್ರೀಮಂತರ ಮೇಲಾಗುತ್ತಿಲ್ಲ. ಅಲ್ಲದೇ ನಿಜವಾಗಿ ಅಪರಾಧ ಎಸಗಿರುವವರು ಸಿಕ್ಕಿಬೀಳುತ್ತಿಲ್ಲ. ಇದನ್ನು ಗಮನಿಸಬೇಕಿದೆ ಎಂದರು.
ನಿರ್ಭಯಾ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಷಾ, ಹೋರಾಟ ಮತ್ತು ಸಂಘಟನೆಗಳ ಒತ್ತಡದಿಂದಾಗಿ ರಚಿತವಾಗುವ ಕಾನೂನುಗಳಿಂದ ಸಮಾಜದಲ್ಲಿ ಕೆಡಕು ಉಂಟಾಗಲಿದೆಯೇ ಹೊರತು ಒಳಿತು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಗಲ್ಲುಶಿಕ್ಷೆ ನೀಡುವಂತೆ ಪ್ರತಿ ಪ್ರಕರಣದಲ್ಲೂ ಒತ್ತಡ ಹೇರಲಾಗುತ್ತಿದೆ. ಜಗತ್ತಿನ ಶೇ.85ರಷ್ಟು ರಾಷ್ಟ್ರಗಳು ಗಲ್ಲು ಶಿಕ್ಷೆ ವಿರೋಧಿಸಿವೆ. ಮಹಾತ್ಮಗಾಂಧಿ ಕೂಡ ಗಲ್ಲು ಶಿಕ್ಷೆ ವಿರೋಧಿಸಿದ್ದರು. ಆದರೆ, ಈಗ ಪ್ರತಿ ಪ್ರಕರಣದಲ್ಲೂ ಗಲ್ಲು ಶಿಕ್ಷೆಗೆ ಆಗ್ರಹಿಸುತ್ತಿರುವುದು, ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗೆ ಇಂತಹ ಕಾನೂನು ಜಾರಿಗೊಳಿಸಲು ಮುಂದಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದರು.
ಹೆಚ್ಚುತ್ತಿರುವ ಕಾನೂನು ಕಟ್ಟಳೆಗಳು ಭ್ರಷ್ಟಾಚಾರ, ಅಧಿಕಾರ ದಾಹಕ್ಕೆ ದಾರಿ ಮಾಡಿಕೊಡಲಿದೆ. ಇದು ಆಡಳಿತಶಾಹಿ ಮತ್ತು ರಾಜಕಾರಣಿಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಲಿದೆ. ಕಾನೂನು ಹೆಚ್ಚಿದಂತಲೆಲ್ಲಾ ದುರ್ಬಳಕೆ ಹೆಚ್ಚಾಗಿ ಸಮಾಜವು ನೈತಿಕ ಅಧಃಪತನ ಕಾಣಬೇಕಾಗುತ್ತದೆ. ನಿಸರ್ಗಕ್ಕೆ ವಿರುದ್ಧವಾದ ಕಾನೂನು ಕಟ್ಟಲೆಗಳನ್ನು ನ್ಯಾಯಾಂಗ ಒಪ್ಪುವುದಿಲ್ಲ. ಆದರೂ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಜನರ ಮೇಲೆ ಕಾನೂನು ಹೇರಲು ಮುಂದಾಗುತ್ತಿರುವುದು ಸರಿಯಲ್ಲ. ಇಂತಹ ಬೆಳವಣಿಗೆ ಸಮಾಜದಲ್ಲಿ ಆಂತರಿಕ ವೈಪರೀತ್ಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಕೀಲರಾದ ಸಂಜೀವ, ರಘು ಮೊದಲಾದವರು ಉಪಸ್ಥಿತರಿದ್ದರು.







