ರಾಹುಲ್ ಜೊತೆ ವಿವಾಹ ಸುದ್ದಿಯ ಬಗ್ಗೆ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಹೇಳಿದ್ದೇನು ?

ಲಕ್ನೊ, ಮೇ 6: ರಾಹುಲ್ ಗಾಂಧಿ ಜೊತೆ ತನ್ನ ವಿವಾಹ ನಡೆಯಲಿದೆ ಎಂಬ ವದಂತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಯ್‌ಬರೇಲಿ ಕ್ಷೇತ್ರದ ಶಾಸಕಿ ಅದಿತಿ ಸಿಂಗ್, ರಾಹುಲ್ ಗಾಂಧಿ ತನಗೆ ಹಿರಿಯ ಸಹೋದರನಂತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರಿಗೆ ತಾನು ರಾಖಿ ಕಟ್ಟಿದ್ದೇನೆ. ರಾಹುಲ್ ಹಾಗೂ ತನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕ ವಿಧಾನಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಹೀಗೆ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಅದಿತಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಇವರ ಉದ್ದೇಶವಾಗಿದೆ. ಈ ಕಾರ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಯಾರು ಕೂಡಾ ಊಹಿಸಬಹುದು ಎಂದು ಅದಿತಿ ತಿಳಿಸಿದ್ದಾರೆ. ರಾಯ್‌ಬರೇಲಿಗೆ ಸೋನಿಯಾ ಗಾಂಧಿ ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದ ಫೋಟೋ ಇದಾಗಿದೆ. ಹಲವು ದಶಕಗಳಿಂದ ರಾಹುಲ್ ಗಾಂಧಿ ಕುಟುಂಬ ಹಾಗೂ ತಮ್ಮ ಕುಟುಂಬದ ಜೊತೆ ಆಪ್ತ ಸಂಬಂಧವಿದೆ ಎಂದು ಅದಿತಿ ತಿಳಿಸಿದ್ದು, ಅನವಶ್ಯಕ ಗಾಳಿ ಸುದ್ದಿ ಪ್ರಸಾರ ಮಾಡುವವರಿಗೆ ಬೇರೇನೂ ಕೆಲಸವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅದಿತಿ ಜೊತೆಯಾಗಿ ತಮ್ಮ ಕುಟುಂಬದವರೊಂದಿಗೆ ಇರುವ ಫೋಟೋಗಳು, ಕಡೆಗೂ ರಾಹುಲ್ ಗಾಂಧಿಗೆ ಸಂಗಾತಿ ದೊರೆತರು ಎಂಬ ಅಡಿಬರಹದೊಂದಿಗೆ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.







