ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಖಚಿತ: ಕೆ.ಸಿ.ವೇಣುಗೋಪಾಲ್

ಬೆಂಗಳೂರು, ಮೇ.6: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು ಖಚಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡಿ ಒಳ ಒಪ್ಪಂದು ಬಹಿರಂಗ ಪಡೆಸಿದ್ದಾರೆ ಎಂದು ಕೆಪಿಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಇಂದಿಲ್ಲಿ ಹೇಳಿದ್ದಾರೆ.
ರವಿವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಭಾಷಣ ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಖಚಿತವಾಗುತ್ತದೆ. ಅಲ್ಲದೆ, ಪ್ರಧಾನಿ ಮೋದಿ ದೇವೇಗೌಡರನ್ನು ಹೊಗಳಲು ಶುರುವಾಗುತ್ತಿದ್ದಂತೆಯೇ ಬಿಜೆಪಿಯ ಚಿಂತಕರು ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳುವುದರಿಂದ ಅಲ್ಪಸಂಖ್ಯಾತರ ಮತಗಳು ಜೆಡಿಎಸ್ ಕೈ ತಪ್ಪುತ್ತವೆ. ಜತೆಗೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿರುವ ಗುಮಾನಿಯೂ ಜನರಲ್ಲಿ ಮೂಡುತ್ತದೆ ಎಂದು ಹೇಳಿದ ನಂತರ ಪ್ರಧಾನಿ ಮೋದಿ ಮರುದಿನದಿಂದಲೇ ತಮ್ಮ ವರಸೆ ಬದಲಾಯಿಸಿ ಜೆಡಿಎಸ್ ವಿರುದ್ಧ ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಟೀಕಾಸ್ತ್ರಗಳನ್ನು ಬಳಸಿದರು ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲ ವರ್ಗಗಳ ಏಳಿಗೆಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದೆ. ಹೀಗಾಗಿಯೇ, ರಾಜ್ಯದ ಮತದಾರ ಕಾಂಗ್ರೆಸ್ ಪರ ನಿಂತಿದ್ದಾನೆ. ಇನ್ನೂ ಸತತ ಸುಳ್ಳು ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿಯ ಬಗ್ಗೆ ಯಾವುದೇ ರೀತಿಯ ಆತಂಕವಿಲ್ಲ ಎಂದರು.
ಈ ಬಾರಿ ಕಾಂಗ್ರೆಸ್ ಪಕ್ಷ 130ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯೇ ಇಲ್ಲ. ಹೀಗಾಗಿ, ನಾವು ಯಾವ ಪಕ್ಷದ ಹೊಂದಾಣಿಕೆಯ ಕುರಿತು ಯೋಚಿಸಿಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಪ್ರಚಾರಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಬಲವಾಗಿದ್ದಾರೆ. ಆದರೆ, ಕಾಂಗ್ರೆಸ್ ಕೂಡ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.







