ಸಂಕುಚಿತ ಮನೋಭಾವನೆಯಿಂದ ಮಹಿಳೆ ಹೊರ ಬರಲಿ: ಡಾ.ಆರ್.ಇಂದಿರಾ
ಬೆಂಗಳೂರು, ಮೇ 6: ಮಹಿಳೆಯರು ಸಂಕುಚಿತ ಮನೋಭಾವನೆಯಿಂದ ಹೊರ ಬಂದಾಗ ಮಾತ್ರ ರಾಜಕೀಯ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಬೆಳೆಯಲು ಸಾಧ್ಯವಿದೆ ಎಂದು ಲೇಖಕಿ ಡಾ.ಆರ್.ಇಂದಿರಾ ಹೇಳಿದ್ದಾರೆ.
ರವಿವಾರ ಕಸಾಪದ ಕುವೆಂಪು ಸಭಾಂಗಣದಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ಚುನಾವಣಾ ರಾಜಕಾರಣ ಮತ್ತು ಮಹಿಳೆ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ದೇಶಕ್ಕೆ ಸ್ವಾತಂತ್ರ ಲಭಿಸಿದಾಗ ಮಹಿಳೆಯರಿಗೂ ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆಯನ್ನು ನೀಡಬೇಕೆಂದು ಈ ಸಮಾಜದ ಮುಖಂಡರುಗಳು ಕನಸನ್ನು ಕಂಡಿದ್ದರು. ಆದರೆ, ಸ್ವಾತಂತ್ರ ಲಭಿಸಿ 70 ವರ್ಷಗಳು ಕಳೆದರೂ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ಸಿಗಲಿಲ್ಲ. ಇನ್ನು ಮುಂದೆಯಾದರೂ ಮಹಿಳೆಯರೇ ಸಂಕುಚಿತ ಮನೋಭಾವನೆಯಿಂದ ಹೊರ ಬಂದು ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಬೇಕೆಂದು ಹೇಳಿದರು.
ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಾಗ ಹಾಗೂ ಕಾಣೆಯಾದಾಗ ಬಹುದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಬೇಕು. ಆದರೆ, ಇಂತಹ ಘಟನೆಗಳು ನಡೆದಾಗ ಪುರುಷ ನಾಯಕರು, ಮಹಿಳಾ ನಾಯಕಿಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸದೆ ಸುಮ್ಮನಾಗುತ್ತಾರೆ. ಇದರಿಂದ, ಮಹಿಳೆಯರ ಮೇಲೆ ಪದೇ ಪದೇ ಅತ್ಯಾಚಾರ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಮಾಜ ಸೆಮ್‌ಲೆಸ್ ಸೊಸೈಟಿಯಾಗುತ್ತಿದ್ದು, ಹೊಸಬರಿಗೆ ಯಾವುದೇ ಅವಕಾಶವಿಲ್ಲದಂತಾಗಿದೆ. ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಮುಖಂಡರುಗಳ ರಕ್ತ ಸಂಬಂಧಿಕರು ಹಾಗೂ ಪರಿಚಯಸ್ಥರೆ ಅಧಿಕಾರದಲ್ಲಿಯಿದ್ದಾರೆ. ಹೀಗಾಗಿಯೇ ಸಮಾಜದಲ್ಲಿ ಅಸಮತೋಲನದ ಹೊಗೆಯಾಡುತ್ತಿದೆ ಎಂದು ಕಿಡಿಕಾರಿದರು.
ಹೋರಾಟಗಾರ, ಲೇಖಕ ಡಾ.ಬಿ.ಆರ್.ಮಂಜುನಾಥ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸುವುದು ಕಷ್ಟಸಾಧ್ಯವಾಗಿದೆ. ಆಕಸ್ಮಿಕವಾಗಿ ಮಹಿಳೆಯರು ರಾಜಕೀಯವನ್ನು ಪ್ರವೇಶಿಸಿದರೂ ಅವರನ್ನು ಎರಡನೆ ದರ್ಜೆಯವರನ್ನಾಗಿ ಕಾಣುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮಿ, ಪತ್ರಕರ್ತೆ ಆರ್.ಪೂರ್ಣಿಮಾ, ಎಚ್.ಎಂ.ಕಾವೇರಿ ಉಪಸ್ಥಿತರಿದ್ದರು.







