ನಕ್ಸಲರ ಶಸ್ತ್ರಾಸ್ತ್ರಗಳಲ್ಲಿ ಈಗ ರ್ಯಾಂಬೋ ಬಾಣಗಳು, ರಾಕೆಟ್ ಬಾಂಬ್‌ಗಳ ಸೇರ್ಪಡೆ:ವರದಿ

ಹೊಸದಿಲ್ಲಿ,ಮೇ 6: ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮತ್ತು ಹೆಚ್ಚಿನ ಸಾವುನೋವುಗಳನ್ನುಂಟು ಮಾಡಲು ನಕ್ಸಲರು ತಮ್ಮ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳ ಸಂಗ್ರಹಕ್ಕೆ ‘ರ್ಯಾಂಬೋ ಬಾಣಗಳು’ ಮತ್ತು ‘ರಾಕೆಟ್ ಬಾಂಬ್’ಗಳಂತಹ ಕೆಲವು ಹೊಸ ಮಾರಕ ಶಸ್ತ್ರಗಳು ಮತ್ತು ಕಚ್ಚಾ ಮದ್ದುಗುಂಡುಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಬಾಂಬ್‌ಗಳನ್ನು ಪತ್ತೆ ಹಚ್ಚುವಲ್ಲಿ ಭದ್ರತಾ ತಂಡಗಳಿಗೆ ನೆರವಾಗುವ ಶ್ವಾನಗಳನ್ನು ವಂಚಿಸಲು ಕಚ್ಚಾ ಬಾಂಬ್‌ಗಳನ್ನು ಪ್ರಾಣಿಗಳ ಮಲದಲ್ಲಿ ಹುದುಗಿಸಿಡುವ ಚಾಣಾಕ್ಷ ತಂತ್ರವನ್ನು ನಕ್ಸಲರು ಕಂಡುಕೊಂಡಿದ್ದಾರೆ ಎಂದು ಐಇಡಿ ಬೆದರಿಕೆಗಳ ಕುರಿತು ಜಂಟಿ ಭದ್ರತಾ ಕಮಾಂಡ್ ಸಿದ್ಧಗೊಳಿಸಿರುವ ವರದಿಯು ಹೇಳಿದೆ.
2017ರ ಮೊದಲ ತ್ರೈಮಾಸಿಕದಲ್ಲಿ ಕೆಲವು ಸಂದರ್ಭಗಳಲ್ಲಿ ಬಚ್ಚಿಟ್ಟ ಐಇಡಿಗಳನ್ನು ಪತ್ತೆ ಹಚ್ಚುವಾಗ ಪ್ರಾಣಿಗಳ ಮಲದ ಅಸಹ್ಯ ವಾಸನೆಯಿಂದ ಶ್ವಾನಗಳು ಕೆರಳುತ್ತಿದ್ದರಿಂದ ಒತ್ತಡವು ಹೆಚ್ಚಾಗಿ ಐಇಡಿಗಳು ಸ್ಫೋಟಗೊಂಡು ಅವು ಮೃತಪಟ್ಟಿದ್ದವು ಅಥವಾ ಗಾಯಗೊಂಡಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಜಾರ್ಖಂಡ್ ಮತ್ತು ಛತ್ತೀಸ್‌ಗಡಗಳಲ್ಲಿ ‘ಒಸಾಮಾ ಹಂಟರ್ಸ್’ ಎಂದು ಖ್ಯಾತಿ ಪಡೆದಿದ್ದ ಎರಡು ಆಕ್ರಮಣಕಾರಿ ಶ್ವಾನಗಳು ನಕ್ಸಲರು ಬಚ್ಚಿಟ್ಟಿದ್ದ ಬಾಂಬ್‌ಗಳನ್ನು ಪತ್ತೆ ಹಚ್ಚುವಾಗ ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಪಡೆಯು ವಿಚಾರಣೆಗೆ ಆದೇಶಿಸಿತ್ತು.
ಪ್ರಾಣಿಗಳ ಮಲದಲ್ಲಿ ಐಇಡಿಗಳನ್ನು ಬಚ್ಚಿಡುವ ತಂತ್ರ ಶ್ವಾನಗಳು ಬಲಿಯಾಗಲು ಕಾರಣವಾಗಿತ್ತು ಎಂದು ಶಂಕಿಸಲಾಗಿದೆ. ಈ ಬಗ್ಗೆ ಈಗ ಭದ್ರತಾ ಪಡೆಗಳ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಹಿಂದಿನ ಹಲವಾರು ವರ್ಷಗಳಲ್ಲಿ ನಕ್ಸಲರು ಬಳಸುತ್ತಿರುವ ಐಇಡಿಗಳು ಭದ್ರತಾ ಪಡೆಗಳಲ್ಲಿ ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗಿವೆ.
ನಕ್ಸಲರು ‘ರ್ಯಾಂಬೋ ಬಾಣ’ವೆಂದು ಕರೆಯುವ ವಿನೂತನ ಸ್ಫೋಟಕವೀಗ ಅವರಿಂದ ಹೆಚ್ಚಾಗಿ ಬಳಕೆಯಾಗುತ್ತಿದೆ. ಬಾಣದ ತುದಿಯಲ್ಲಿ ಕಡಿಮೆ ಮಟ್ಟದ ಗನ್ ಪೌಡರ್ ಅಥವಾ ಸಿಡಿಮದ್ದಿನ ಪುಡಿಯನ್ನು ಅಳವಡಿಸಲಾಗುತ್ತದೆ ಮತ್ತು ಬಾಣವು ಗುರಿಗೆ ಅಪ್ಪಳಿಸಿದಾಗ ಈ ಸ್ಫೋಟಕಗಳು ಸಿಡಿಯುತ್ತವೆ.ರ್ಯಾಂಬೋ ಬಾಣಗಳಿಂದ ಹೆಚ್ಚಿನ ಹಾನಿಯಾಗುವುದಿಲ್ಲವಾದರೂ ಅವು ತೀವ್ರ ಉಷ್ಣತೆ ಮತ್ತು ಹೊಗೆಯನ್ನು ಹುಟ್ಟಿಸುವ ಮೂಲಕ ಯೋಧರನ್ನು ಗೊಂದಲಕ್ಕೀಡು ಮಾಡುತ್ತವೆ ಮತ್ತು ಇದು ನಕ್ಸಲರು ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅವರ ಶಸ್ತ್ರಾಸ್ತ್ರಗಳನ್ನು ಸುಸ್ಥಿತಿಯಲ್ಲಿ ಲೂಟಿ ಮಾಡಲು ನೆರವಾಗುತ್ತದೆ.
ಪ್ರಬಲ ಬಾಂಬ್‌ಗಳ ಅಥವಾ ಐಇಡಿ ಸ್ಫೋಟಗಳಿಂದ ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳಿಗೆ ಹಾನಿಯಾಗಿ ಅವು ನಿರುಪಯುಕ್ತವಾಗುವುದರಿಂದ ನಕ್ಸಲರು ಈ ತಂತ್ರವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ವರದಿಯು ತಿಳಿಸಿದೆ.







