ಮಂಡ್ಯ: ದರ್ಶನ್ ಪುಟ್ಟಣ್ಣಯ್ಯ ಪರ ದೇವನೂರು ಮಹದೇವ ಮತಯಾಚನೆ

ಮಂಡ್ಯ, ಮೇ 6: ದಿವಂಗತ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಮಗ ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದರೆ ಅದು ನ್ಯಾಯವಂತರ ಗೆಲುವು. ರಾಜ್ಯಕ್ಕೆ ಒಂದು ಹೊಸ ಮುಖದ ಯುವ ನಾಯಕತ್ವ ಸಿಕ್ಕಂತಾಗುತ್ತದೆ ಎಂದು ಸಾಹಿತಿ ದೇವನೂರು ಮಹದೇವ ಹೇಳಿದ್ದಾರೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ದಲಿತರ ಕಾಲನಿಯಲ್ಲಿ ರವಿವಾರ ದರ್ಶನ್ ಪುಟ್ಟಣ್ಣಯ್ಯ ಪರ ಪತ್ನಿ ಪ್ರೊ.ಸುಮಿತ್ರಬಾಯಿ ಜತೆ ಬಿರುಸಿನ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಶಾಸಕ, ರೈತ ನಾಯಕ ಪುಟ್ಟಣ್ಣಯ್ಯನವರು ನ್ಯಾಯ ನೀತಿಯ ಪರ ಮತ್ತು ದುಡಿಯುವ ವರ್ಗದ ಪರವಿದ್ದರು. ಇಂತಹ ಮೌಲ್ಯವನ್ನು ಇಟ್ಟುಕೊಂಡ ಕಾರಣಕ್ಕಾಗಿಯೇ ಜನತೆ ಅವರ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಗೌರವವನ್ನಿಟ್ಟುಕೊಂಡಿದ್ದರು. ಪುಟ್ಟಣ್ಣಯ್ಯನವರ ಇಂತಹ ಮೌಲ್ಯಗಳನ್ನು ಮುಂದುವರೆಸಲು ಸಿದ್ದನಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಕರೆ ನೀಡಿದರು.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಆಸೆಯಂತೆ ದಲಿತ ಮಹಿಳೆಯಿಂದ ಮೊದಲು ಪೂಜೆ ಸಲ್ಲಿಸಲಾಯಿತು. ಇಂತಹದ್ದೇ ಸಂದರ್ಭ ಮಂಗಳೂರಿನ ಕುದ್ಮುಲ್ ರಂಗರಾವ್ ಅವರಿದ್ದಾಗ ನಡೆದಿತ್ತು. ಇವು ಈ ನಾಡಿನ ಇತಿಹಾಸ ಎಂದು ದೇವನೂರು ಮಹದೇವರವರು ಸ್ಮರಿಸಿದರು.
ದಲಿತರಿಗೆ ಮೊದಲು ಶಿಕ್ಷಣ ನೀಡಿದ ಕುದ್ಮುಲ್ ರಂಗರಾವ್ ಅವರು ತಾನು ಸತ್ತಾಗ ದಲಿತ ಮಹಿಳೆಯರಿಂದ ಪೂಜೆ ಸಲ್ಲಿಸಬೇಕು ಎಂದು ವಿಲ್ ಮಾಡಿದ್ದರು. ಇದು ಪ್ರಜ್ಞಾಪೂರ್ವಕವಾಗಿಯೇ ಇತ್ತು. ಆದರೆ, ಪುಟ್ಟಣ್ಣಯ್ಯನವರ ಅಭಿಲಾಷೆ ಸಹಜವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಪುಟ್ಟಣ್ಣಯ್ಯ ನನ್ನ ತಮ್ಮನಂತಿದ್ದರು:
ಪ್ರೊ.ಸುಮಿತ್ರಾಬಾಯಿ ದೇವನೂರು ಮಹದೇವ ಮಾತನಾಡಿ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನನ್ನ ತಮ್ಮನಂತಿದ್ದರು. ಅವರು ಸತ್ತಾಗ ನನ್ನ ಸ್ವಂತ ತಮ್ಮನೊಬ್ಬನನ್ನು ಕಳೆದುಕೊಂಡಂತೆ ದುಖಃಪಟ್ಟೆ. ಅಂತಹ ಹೃದಯವಂತ ಮಾನವೀಯತೆಯ ವ್ಯಕ್ತಿ ಮತ್ತೊಬ್ಬ ಸಿಗಲಾರರು. ಈಗ ನನ್ನ ತಮ್ಮ ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಅವನನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಆ ಮೂಲಕ ನ್ಯಾಯ, ನೀತಿ, ಮಾನವೀಯತೆಯನ್ನು ಬೆಂಬಲಿಸಬೇಕಾಗಿದೆ ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಲಕ್ಷ್ಮಣ್ ಹೊಸಕೋಟೆ, ಲಾಲ್‍ಬಹದ್ದೂರು ಶಾಸ್ತ್ರಿ, ಎಚ್.ಪಿ.ಸೋಮಶೇಖರ್, ದೇವೇಗೌಡನಕೊಪ್ಪಲು ಪುಟ್ಟಣ್ಣ, ಅರಳಕುಪ್ಪೆ ದೇವರಾಜು (ಅಗ್ನಿ ಶ್ರೀಧರ್), ಸಣಬ ಚಿಕ್ಕಹನುಮಯ್ಯ, ಬೇವಿನಕುಪ್ಪೆ ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.







