ಅಂತರ್ಜಾತಿ/ಅಂತರ್ಧರ್ಮೀಯ ವಿವಾಹಕ್ಕೆ ಬೆಂಬಲ ನೀಡುವ ಕಾನೂನು: ಮಹಾರಾಷ್ಟ್ರ ಸರಕಾರ ಚಿಂತನೆ

ಮುಂಬೈ, ಮೇ.6: ಮರ್ಯಾದಾ ಹತ್ಯೆಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳಿಗೆ ಉತ್ತೇಜನ ನೀಡುವ ಕಾನೂನನ್ನು ರೂಪಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸುತ್ತಿದೆ. ವಿಭಿನ್ನ ಜಾತಿ ಅಥವಾ ಧರ್ಮಗಳಿಗೆ ಸೇರಿದ ದಂಪತಿ ಸಾಮಾಜಿಕ ಬಹಿಷ್ಕಾರ ಮತ್ತು ಮರ್ಯಾದಾ ಹತ್ಯೆಯ ಬೆದರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ರಾಜ್ಯ ಸಾಮಾಜಿಕ ನ್ಯಾಯ ಸಚಿವ ರಾಜ್‌ಕುಮಾರ್ ಬಡೋಲ್ ತಿಳಿಸಿದ್ದಾರೆ.
ಹಾಗಾಗಿ ಇತರ ಆಯಾಮಗಳ ಜೊತೆಗೆ ಜೀವಭಯವನ್ನು ಎದುರಿಸುವ ದಂಪತಿಗಳಿಗೆ ಯಾವ ರೀತಿ ರಕ್ಷಣೆಯನ್ನು ನೀಡಬಹುದು ಎಂಬುದರ ಬಗ್ಗೆ ಪ್ರಮುಖವಾಗಿ ಗಮನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿಯ (ಎನ್ಸಿಆರ್‌ಬಿ)ಯ ಪ್ರಕಾರ ಮರ್ಯಾದಾ ಹತ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಪಡೆದಿದೆ. ಎನ್ಸಿಆರ್‌ಬಿಯ 2016ರ ವರದಿಯಲ್ಲಿ ಆ ವರ್ಷದಲ್ಲಿ ಎಂಟು ಜನರನ್ನು ಮರ್ಯಾದಾ ಹತ್ಯೆಯ ಹೆಸರಲ್ಲಿ ಕೊಲ್ಲಲಾಗಿದೆ. ಸದ್ಯ ಇರುವ ಕಾನೂನಿನ ಒಂದು ಲೋಪವೆಂದರೆ, ದಂಪತಿ ಪೈಕಿ ಒಬ್ಬರು ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು ಇನ್ನೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ಅವರಿಗೆ ಹುಟ್ಟುವ ಮಗು ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿ ಹಾಗೂ ಇತರ ಸೌಲಭ್ಯಗಳಿಂದ ವಂಚಿತವಾಗುತ್ತದೆ ಎಂದು ಬಡೋಲೆ ತಿಳಿಸಿದ್ದಾರೆ. ಇಂಥ ದಂಪತಿಯ ಮಗುವಿಗೂ ಮೀಸಲಾತಿ ದೊರೆಯುವಂತೆ ಮಾಡುವುದು ಹಾಗೂ ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹವಾದ ದಂಪತಿಯ ಮಕ್ಕಳ ಶುಲ್ಕವನ್ನು ರದ್ದು ಮಾಡುವುದು ಸೇರಿದಂತೆ ಹಲವು ವಿಶೇಷ ರಿಯಾಯಿತಿಗಳನ್ನು ನೀಡಲು ಸರಕಾರ ಚಿಂತಿಸುತ್ತಿದೆ ಎಂದು ಬಡೋಲೆ ತಿಳಿಸಿದ್ದಾರೆ.





