ಶ್ರೀರಂಗಪಟ್ಟಣ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ದೂರು
ಮಂಡ್ಯ, ಮೇ 6: ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮೇ 12 ರಂದು ನಡೆಯಲಿರುವ ಚುನಾವಣೆಗೆ ತಮ್ಮ ನಾಮಪತ್ರದ ಜತೆ ಸಲ್ಲಿಸಿರುವ ಅಫಿದಾವಿತ್‍ನಲ್ಲಿ ತನ್ನ ಪತ್ನಿ ಹೆಸರಿನಲ್ಲಿರುವ 85 ನಿವೇಶನ ಹಾಗೂ ತನ್ನ ಹೆಸರಿನ 1 ನಿವೇಶನದ ಬಗ್ಗೆ ಮಾಹಿತಿ ಸಲ್ಲಿಸಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಆರೋಪಿಸಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಅವರಿಗೆ ದೂರು ನೀಡಿದ್ದಾರೆ.
ಎ.ಬಿ.ರಮೇಶ್ ಅವರು ತಮ್ಮ ಅಫಿದಾವಿತ್‍ನಲ್ಲಿ ಪುಟದ ಸಂಖ್ಯೆ 10ರಲ್ಲಿ ಸ್ಥಿರಾಸ್ತಿಗಳ ವಿವರಗಳನ್ನು ನೀಡಿದ್ದು, ಅದರಲ್ಲಿ ತನ್ನ ಪತ್ನಿ ಸುಮತಿ ಹೆಸರಿನಲ್ಲಿ ಕಿರಂಗೂರು ಗ್ರಾಮ ಸರ್ವೆ 402/2, 418/3, 418/4, 419/2, 419/3ರ ಜಮೀನು ಇರುವ ಬಗ್ಗೆ ಮಾಹಿತಿ ನೀಡಿದ್ದು, ವಿಸ್ತೀರ್ಣ ಎಷ್ಟಿದೆ ಎಂಬುದರ ಮಾಹಿತಿ ನೀಡಿರುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಮೇಶ್ ಬಂಡಿಸಿದ್ದೇಗೌಡ ಅವರು ತಮ್ಮ ಹೆಸರಿನಲ್ಲಿರುವ ಒಂದು ನಿವೇಶನ ಹಾಗೂ ತನ್ನ ಪತ್ನಿ ಹೆಸರಿನಲ್ಲಿರುವ 85 ನಿವೇಶನಗಳ ಬಗ್ಗೆ ಮಾಹಿತಿಯನ್ನು ಮುಚ್ಚಿರುವ ಬಗ್ಗೆ ಕಾನೂನು ಕ್ರಮ ಜರುಗಿಸಿ ಇವರ ನಾಮಪತ್ರವನ್ನು ಅಸಿಂಧುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.





