ಈ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ
ಮೈಸೂರು,ಮೇ.6: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗಿದ್ದು, ಸಮೀಕ್ಷೆಗಳೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಹಾಗಾಗಿ ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 5 ವರ್ಷಗಳ ಕಾಲ ಒಂದು ಪಕ್ಷ ಒಬ್ಬ ಮುಖ್ಯಮಂತ್ರಿ ಯಶಸ್ವಿಯಾಗಿ ಆಡಳಿತ ನಡೆಸಿ ಎಲ್ಲಾ ವರ್ಗಗಳನ್ನು ಸಮಾನವಾಗಿ ನಡೆಸಿಕೊಂಡಿದ್ದಾರೆ ಎಂದರು.
ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಜಾತಿ ಒಡೆಯುವ ಕೆಲಸ ಮಾಡಿಲ್ಲ. ಅದು ನೂರಾರು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಸರ್ಕಾರದ ಮುಂದಿತ್ತು. ಆದರೆ ವಿರೋಧ ಪಕ್ಷವಾಗಿ ವಿಫಲವಾಗಿರುವ ವಿಪಕ್ಷಗಳ ನಾಯಕರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಕೀಳುಮಟ್ಟದ ಭಾಷೆ ಬಳಸಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇಂದಿರಾ ಕ್ಯಾಂಟಿನ್ ವಿರೋಧ ಮಾಡುವ ಬಿಜೆಪಿಯವರು ಅದೇ ಕ್ಯಾಂಟಿನ್ ನಲ್ಲಿ ಊಟ ಮಾಡುತ್ತಾರೆ, ಮತ್ತು ಅನ್ನ ಭಾಗ್ಯವನ್ನು ವಿರೋಧಿಸುವವರೂ ಕೂಡ ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಂತು ಅಕ್ಕಿ ಪಡೆಯುತ್ತಿದ್ದಾರೆ. ಹೀಗಿದ್ದರೂ ಕೇವಲ ರಾಜಕೀಯಕ್ಕಾಗಿ ಮಾತ್ರ ಅದನ್ನು ವಿರೋಧಿಸುವುದು ಸರಿಯಲ್ಲ ಎಂದರು.
ಒಳ ಮೀಸಲಾತಿ ವಿಚಾರವಾಗಿ ಸದಾಶಿವ ಆಯೋಗದ ವರದಿಯನ್ನು ಸದಾನಂದಗೌಡರ ಅವಧಿಯಲ್ಲಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಅಂದು ಯಾರೂ ಚಕಾರವೆತ್ತಿಲ್ಲ .ಜೊತೆಗೆ ಅಂದು ನಮ್ಮ ಜನಾಂಗದ ಜನಪ್ರತಿನಿಧಿಗಳು ಕೂಡ ಇರಲಿಲ್ಲ. ಹಾಗಾಗಿ ಆ ವರದಿ ಮೂಲೆಗುಂಪಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಅದನ್ನು ಕಾನೂನು ಸಲಹೆ ಪಡೆದು ಕೇಂದ್ರಕ್ಕೆ ಸಲ್ಲಿಸಲು ಮುಂದಾಗಿದೆ ಎಂದು ಹೇಳಿದರು.
ಒಟ್ಟಾರೆ ರಾಜ್ಯ ಸರ್ಕಾರ ರಸ್ತೆ, ವಿದ್ಯುತ್, ಕೈಗಾರಿಕೆಗಳ ಅಭಿವೃದ್ಧಿ, ಪ್ರವಾಸೋದ್ಯಮ, ಸಮಾಜಕಲ್ಯಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮುಂದಿದೆ. ಹಾಗಾಗಿ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಚಿನ್ನೇಗೌಡ, ಕೋಟೆಹುಂಡಿ ಮಹದೇವು, ಆರ್.ಪ್ರಕಾಶ್ ಕುಮಾರ್, ಮಹದೇವಯ್ಯ, ಧೃವರಾಜ್, ಮತ್ತು ಜೆ.ಎನ್.ಲಕ್ಮಣ್ ಉಪಸ್ಥಿತರಿದ್ದರು.







