ಸ್ಪಷ್ಟತೆಯ ಕೊರತೆ:ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಿಯನ್ನು ತಿರಸ್ಕರಿಸಿದ ಭಾರತೀಯ ಪತ್ರಿಕಾ ಮಂಡಳಿ

ಹೊಸದಿಲ್ಲಿ,ಮೇ 6: ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್(ಆರ್‌ಡಬ್ಲ್ಯುಬಿ) ಸಂಸ್ಥೆಯು ಇತ್ತೀಚಿಗೆ ಬಿಡುಗಡೆಗೊಳಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಿಯನ್ನು ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ)ಯು ತಿರಸ್ಕರಿಸಿದೆ. ಸ್ಥಾನ ನಿರ್ಧರಿಸುವಲ್ಲಿ ಪ್ರಮುಖವಾಗಿರುವ, ಅಭಿಪ್ರಾಯ ಮತ್ತು ಗ್ರಹಿಕೆಗಳನ್ನು ಆಧರಿಸಿರುವ ಮರುಮಾಹಿತಿಗಳಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ಅದು ಹೇಳಿದೆ. ಆರ್ ಡಬ್ಲ್ಯುಬಿ ಪ್ರತಿವರ್ಷ 180 ದೇಶಗಳಿಗಾಗಿ ಸಿದ್ಧಗೊಳಿಸುವ ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ ಕಳೆದ ವರ್ಷ 138ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 140ನೇ ಸ್ಥಾನಕ್ಕೆ ಕುಸಿದಿದೆ.
ಬಹುಸಾಂಸ್ಕೃತಿಕತೆಯ ಮಟ್ಟ,ಮಾಧ್ಯಮ ಸ್ವಾತಂತ್ರ್ಯ,ವಾತಾವರಣ ಮತ್ತು ಸ್ವಯಂ ಸೆನ್ಸಾರ್‌ಶಿಪ್,ಕಾನೂನು ಚೌಕಟ್ಟು,ಪಾರದರ್ಶಕತೆ ಮತ್ತು ಸುದ್ದಿ ಹಾಗೂ ಮಾಹಿತಿಗಳ ಸೃಷ್ಟಿಯನ್ನು ಬೆಂಬಲಿಸುವ ಮೂಲಸೌಕರ್ಯಗಳ ಗುಣಮಟ್ಟ ಇತ್ಯಾದಿ ಅಂಶಗಳ ವೌಲ್ಯಮಾಪನ ನಡೆಸಿ ಈ ಸೂಚಿಯನ್ನು ಸಿದ್ಧಗೊಳಿಸಲಾಗುತ್ತದೆ.
2017ರಲ್ಲಿ ಬೆಂಗಳೂರಿನಲ್ಲಿ ಕೊಲೆಯಾದ ಗೌರಿ ಲಂಕೇಶರಂತಹ ಪತ್ರಕರ್ತರ ಮೇಲಿನ ದೈಹಿಕ ಹಿಂಸೆಯು ಸೂಚಿಯಲ್ಲಿ ಭಾರತದ ಸ್ಥಾನ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಆರ್‌ಡಬ್ಲ್ಯುಬಿ ಹೇಳಿತ್ತು. ದ್ವೇಷಾಪರಾಧ ಭಾರತವನ್ನು ಕಾಡುತ್ತಿರುವ ಇನ್ನೊಂದು ಸಮಸ್ಯೆಯಾಗಿದೆ ಎಂದೂ ಅದು ಬೆಟ್ಟು ಮಾಡಿತ್ತು.
ಸೂಚಿಯನ್ನು ಹೇಗೆ ಸಿದ್ಧಗೊಳಿಸಲಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಪಿಸಿಐ 2015ರಿಂದಲೂ ಆರ್‌ಡಬ್ಲುಬಿಗೆ ಹಲವಾರು ಪತ್ರಗಳನ್ನು ಬರೆದಿದೆ,ಆದರೆ ಯಾವುದಕ್ಕೂ ಉತ್ತರ ಲಭಿಸಿಲ್ಲ ಎಂದು ಮಂಡಳಿಯ ಅಧ್ಯಕ್ಷ ನ್ಯಾ(ನಿ) ಸಿ.ಕೆ. ಪ್ರಸಾದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆರ್‌ಡಬ್ಲುಬಿಯ ಸಹಭಾಗಿ ಸಂಸ್ಥೆ,ವಿಶ್ವಾದ್ಯಂತದ ಅದರ ವರದಿಗಾರರು, ಪತ್ರಕರ್ತರು,ಸಂಶೋಧಕರು,ನ್ಯಾಯಶಾಸ್ತ್ರಜ್ಞರು ಮತ್ತು ಮಾನವ ಹಕ್ಕು ಕಾರ್ಯಕರ್ತರಿಗೆ ಕಳುಹಿಸುವ ಪ್ರಶ್ನಾವಳಿಯನ್ನು ಈ ರ್ಯಾಂಕಿಂಗ್‌ಗಳು ಭಾಗಶಃ ಆಧರಿಸಿವೆ ಎಂಬ ವರದಿಗಳಿವೆ ಎಂದು ಅವರು ಹೇಳಿದರು.







