ಮೋದಿ ದೇವೆಗೌಡರನ್ನು ಒಮ್ಮೆ ಹೊಗಳಿ, ನಂತರ ಜೆಡಿಎಸ್‍ನ್ನು ತೆಗಳುತ್ತಾರೆ: ಡಿ.ಎಲ್.ವಿಜಯಕುಮಾರ್
ಶೃಂಗೇರಿ,ಮೇ.06: ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಜಿಲ್ಲೆಯಲ್ಲಿ 5 ಮಂದಿ ಸಮರ್ಥ, ಪ್ರಾಮಾಣಿಕ ಹಾಗೂ ಸಜ್ಜನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಕಾರ್ಯಕ್ರಮಗಳು, ಈ ಬಾರಿಯ ಚುನಾವಣಾ ಪ್ರಣಾಳಿಕೆಯ ವಿಷಯಗಳು ಹಾಗೂ ಕ್ಷೇತ್ರಾದ್ಯಂತ ನಡೆದಿರುವ ಪ್ರಚಾರ ಕಾರ್ಯದ ನಂತರ ಈ 5 ಮಂದಿ ಅಭ್ಯರ್ಥಿಗಳೂ ಜಯಗಳಿಸುವ ವಿಶ್ವಾಸ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್ ತಿಳಿಸಿದರು.
ಭಾನುವಾರ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಪರ ಚುನಾವಣಾ ಪ್ರಚಾರ ಕಾರ್ಯದ ವಾಸ್ತವದ ಅವಲೋಕನ ನಡೆಸಿದ ನಂತರ ಇಂದಿರಾ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಕಾರ್ಯಕ್ರಮಗಳ ಪ್ರಯೋಜನ ಪಡೆದ ರಾಜ್ಯದ ಜನರು ಸಂತೃಪ್ತರಾಗಿ ಇದು ಭ್ರಷ್ಟಾಚಾರ ರಹಿತ ಸರ್ಕಾರ ಎಂಬ ಅಭಿಮಾನದ ಮುದ್ರೆಯನ್ನು ಒತ್ತಿದ್ದಾರೆ ಎಂದರು.
ಕಳೆದ ಬಾರಿ ರಾಜೇಗೌಡರು ಅಲ್ಪ ಮತಗಳ ಕೊರತೆಯ ಕಾರಣ ಗೆಲುವಿನಿಂದ ವಂಚಿತರಾಗಿದ್ದರು. ಆದರೆ ನಂತರದ 5 ವರ್ಷ ಕಾಲ ಅವರು ಕ್ಷೇತ್ರದ ಜನರೊಂದಿಗೆ ಸದಾ ಇದ್ದುಕೊಂಡು, ಅವರಿಂದ ಬಂದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರಿಂದ ಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿ ಅವರು ಜನಾನುರಾಗಿಗಳಾಗಿದ್ದಾರೆ. ಈ ಬಾರಿ ಜನರು ಬದಲಾವಣೆಯನ್ನು ಬಯಸುತ್ತಿದ್ದು ರಾಜೇಗೌಡರ ಜಯವು ಶತಸಿದ್ಧವಾಗಿದೆ ಎಂದು ಹೇಳಿದರು.
ಬಿಜೆಪಿ ವರಿಷ್ಠರು ಗಣಿಧಣಿ ಜನಾರ್ಧನ ರೆಡ್ಡಿಗೂ ತಮಗೂ ಸಂಬಂಧವಿಲ್ಲ ಎಂದರೆ, ಇನ್ನೊಂದೆಡೆ ಯಡಿಯೂರಪ್ಪನವರು ರೆಡ್ಡಿಯೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರು ದೇವೆಗೌಡರನ್ನು ಒಮ್ಮೆ ಹೊಗಳಿದರೆ, ಇದರ ಬೆನ್ನಿಗೆ ಜೆಡಿಎಸ್‍ನ್ನು ತೆಗಳುತ್ತಾರೆ. ಒಟ್ಟಾರೆಯಾಗಿ ಈ ಎರಡು ಪಕ್ಷಗಳು ತೆರಮರೆಯಲ್ಲಿ ಕೈಜೋಡಿಸಿ, ಹೊರಗೆ ಗೊಂದಲವನ್ನು ಹುಟ್ಟಿಹಾಕುತ್ತಿವೆ. ಜನ ಈ ಬಾರಿ ಇವರನ್ನು ನಂಬುವುದಿಲ್ಲ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್.ನಟರಾಜ್ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ನಮ್ಮ ಅಭ್ಯರ್ಥಿಗಳು ಗೆದ್ದಿಲ್ಲ. ಈ ಚುನಾವಣೆಯು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕಳೆದ ಒಂದು ವರ್ಷದಿಂದ ಕಾರ್ಯಕರ್ತರು ತಳಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಿದ್ದರಿಂದ ಜನರು ಈ ಬಾರಿ ಬದಲಾವಣೆ ಬಯಸಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ವಕ್ತಾರ ಉಮೇಶ ಪೂದುವಾಳ್ ಮಾತನಾಡಿ, ಶೃಂಗೇರಿಯ ಕ.ರಾ.ರ.ಸಾ. ಡಿಪೊ ಸ್ಥಾಪನೆಯಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕೈವಾಡದಿಂದಾಗಿ ವಿಳಂಬವಾಗಿದ್ದು, ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಮ್ಮ ಅಭ್ಯರ್ಥಿ ರಾಜೇಗೌಡರು ಶಾಸಕರಾಗಿ ಬಂದು ಇದರ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಶಿವಾನಂದ, ಸಹಕಾರ್ಯದರ್ಶಿ ನರೇಂದ್ರ, ಲಕ್ಷ್ಮೀಶ್, ಕಲ್ಕುಳಿ ವೆಂಕಟೇಶ್, ಮಂಜುನಾಥ್, ರಾಜನ್ ಇದ್ದರು.







