ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಬಿ.ಎಲ್.ಶಂಕರ್

ಚಿಕ್ಕಮಗಳೂರು,ಮೇ 6: ವಿಷಯಾಧಾರಿಯವಾಗಿ ವಿಚಾರಗಳನ್ನು ಮಂಡಿಸಲಿ. ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲಿ. ಆದರೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಬಿ.ಎಲ್.ಶಂಕರ್ ಎಚ್ಚರಿಸಿದ್ದಾರೆ.
ನಗರದ ಅರವಿಂದನಗರ, ಕುಂಬಾರರ ಬೀದಿ, ಬಸವನಹಳ್ಳಿ ಬಡಾವಣೆಗಳಲ್ಲಿ ಪಾದಯಾತ್ರೆಯೊಂದಿಗೆ ಮತಯಾಚನೆ ನಡೆಸಿದ ನಂತರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ನನ್ನ ವಿಳಾಸದ ಬಗ್ಗೆ ಬಿಜೆಪಿಗರು ಮಾತನಾಡುತ್ತಾರೆ. ನಾನು ಒಂದೇ ಒಂದು ವಿಳಾಸವನ್ನು ಹೊಂದಿದ್ದೇನೆ. ಆದರೆ, ಶಾಸಕರು ಪಾರಂ ಹೌಸ್, ಹಿರೇಮಗಳೂರು, ಬಸವನಹಳ್ಳಿ, ಹೀಗೆ ಹಲವು ವಿಳಾಸಗಳನ್ನು ಹೊಂದಿದ್ದಾರೆ. ನಾನು ಮೂಡಿಗೆರೆ ಕ್ಷೇತ್ರದವನು. ಇಲ್ಲಿನ ಶಾಸಕರು ಮೂಡಿಗೆರೆ ಕ್ಷೇತ್ರದವರು. ರಾಜಕೀಯಕ್ಕಾಗಿ ಹೊರಗಿನವರು ಎಂದು ಬಿಜೆಪಿಗರು ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ವಿಳಾಸ ಮುಖ್ಯಅಲ್ಲ. ಅವರು ಏನು ಮಾಡಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಇದನ್ನು ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ರಾಜಕೀಯದಲ್ಲಿ ವಿಷಯಾಧಾರಿತವಾಗಿ ಟೀಕೆ, ಆರೋಪಗಳನ್ನು ಮಾಡಲಿ. ಆದರೆ, ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ಇಲ್ಲಿನ ಶಾಸಕರು ಹೇಗೆ ಶ್ರೀಮಂತರಾದರು ? ಹೇಗೆ ಸಂಪತ್ತು ಗಳಿಸಿದರು ? ಆಸ್ತಿ ಹೇಗೆ ಮಾಡಿದ್ದಾರೆ ? ಈ ಕ್ಷೇತ್ರದಲ್ಲಿ ಏನೇನು ಕಾರ್ಯಗಳು ನಡೆದಿವೆ ಎಂಬುದು ನನಗೆ ಗೊತ್ತಿದೆ. ಈ ವಾರ್ಡಿನ ನಗರಸಭೆ ಸದಸ್ಯರು ವಿಳಾಸ ಕೇಳುತ್ತಾರೆ. ಅವರು ಹೇಗಿದ್ದರು. ಹೇಗಾದರು ಎಂಬುದು ನನಗೆ ಗೊತ್ತಿದೆ. ವೈಯಕ್ತಿಕ ವಿಚಾರಗಳನ್ನು ರಾಜಕೀಯ ಕಾರಣಕ್ಕಾಗಿ ಪ್ರಚಾರ ಮಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಡಾ.ಬಿ.ಎಲ್.ಶಂಕರ್ ಒಬ್ಬ ಜನಪರ ಕಾಳಜಿಯ ನಾಯಕರಾಗಿದ್ದಾರೆ. ಈ ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರದ ನೀರಾವರಿ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದು, ಅವರನ್ನು ಮತದಾರರು ಅತಿ ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.
ರಂಗಭೂಮಿ ಕಲಾವಿದ ನಾಗರಾಜಮೂರ್ತಿ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಇಡೀ ರಾಜ್ಯದಲ್ಲೇ ಅತ್ಯುತ್ತಮರೆನ್ನಬಹುದಾದ ಡಾ.ಬಿ.ಎಲ್.ಶಂಕರ್ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವುದು ಕ್ಷೇತ್ರದ ಜನರ ಅದೃಷ್ಟ ಎಂದು ಭಾವಿಸಿದ್ದೇನೆ. ಜನರು ಅವರನ್ನು ಬೆಂಬಲಿಸುವುದರೊಂದಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ, ಚಿತ್ರನಟಿ ರೇಖಾದಾಸ್ ಮಾತನಾಡಿದರು. ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಸಿಪಿಐ ನಾಯಕಿ ರಾಧಾಸುಂದರೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ, ಕಿಸಾನ್ ಸೆಲ್‍ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಬೂತ್ ಅಧ್ಯಕ್ಷರಾದ ಕೆಂಪನಹಳ್ಳಿ ಸತೀಶ್, ಸಿಡಿಎ ಸದಸ್ಯ ಶ್ರೀನಿವಾಸ್, ಕೃಷ್ಣಮೂರ್ತಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ ಪ್ರಚಾರ ಸಮಿತಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷಕೆ.ವಿ.ಶಿವಕುಮಾರ್, ಕ್ಷೇತ್ರ ಸಮಿತಿ ಯುವ ಘಟಕ ಅಧ್ಯಕ್ಷ ರಾಹಿಲ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೂಬೆನ್ ಮೊಸೆಸ್, ಮುಖಂಡರಾದ ಯಶೋದಾ, ಫಾತಿಮಾ, ರುಕ್ಸಾನ ಇದ್ದರು.







