ಯುವಕನಿಗೆ 21 ವರ್ಷ ಪೂರ್ಣಗೊಳ್ಳದೇ ಇದ್ದರೂ ಜೋಡಿ ಲೀವ್-ಇನ್ ಸಂಬಂಧ ಇರಿಸಿಕೊಳ್ಳಬಹುದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮೇ 6: ವಿವಾಹವಾಗುವ ಕಾನೂನಾತ್ಮಕ ಪ್ರಾಯ ಯುವಕನಿಗೆ 21 ಆಗದೇ ಇದ್ದರೂ ಜೋಡಿಗಳು ಲಿವ್-ಇನ್ ಸಂಬಂಧ ಇರಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ ಹಾಗೂ ಯಾರೊಂದಿಗೆ ಜೀವಿಸಬೇಕು ಎಂದು ನಿರ್ಧರಿಸಲು 20 ವರ್ಷದ ತುಷಾರಳಿಗೆ ಮುಕ್ತ ಅವಕಾಶ ನೀಡಿದೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ವಿವಾಹ ನಡೆದಾಗ ನಂದಕುಮಾರ್‌ಗೆ 21 ವರ್ಷ ಆಗಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಕೇರಳ ಉಚ್ಚ ನ್ಯಾಯಾಲಯ ವಿವಾಹ ಅನೂರ್ಜಿತಗೊಳಿಸಿತ್ತು ಹಾಗೂ ತುಷಾರ್‌ಳನ್ನು ಆಕೆಯ ತಂದೆಯೊಂದಿಗೆ ಕಳುಹಿಸಿಕೊಟ್ಟಿತ್ತು.
ಈ ಪ್ರಕರಣದಲ್ಲಿ, ತನ್ನ ಪುತ್ರಿಯನ್ನು ನಂದ ಕುಮಾರ್ ಅಪಹರಿಸಿದ್ದಾನೆ ಎಂದು ತುಷಾರಾಳ ತಂದೆ ಆರೋಪಿಸಿದ್ದರು ಹಾಗೂ ನಂದಕಮಾರ್‌ನೊಂದಿಗಿನ ವಿವಾಹವನ್ನು ಅಸಿಂಧುಗೊಳಿಸಿ ಕೇರಳ ಉಚ್ಚ ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿದ್ದರು. ತನ್ನ ಪುತ್ರಿಯನ್ನು ವಿವಾಹವಾದಾಗ ನಂದಕುಮಾರ್‌ಗೆ 20 ವರ್ಷ ಮಾತ್ರ ಆಗಿತ್ತು ಎಂದು ತುಷಾರ್ ತಂದೆ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ತಂದೆಯೊಂದಿಗೆ ತೆರಳುವಂತೆ ಉಚ್ಚ ನ್ಯಾಯಾಲಯ ತುಷಾರಾಳಿಗೆ ಸೂಚಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್, ತುಷಾರಾ ಹಾಗೂ ನಂದಕುಮಾರ್ ವಯಸ್ಕರಾಗಿದ್ದಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡರೆ ಸಾಕು ಎಂದು ಪ್ರತಿಪಾದಿಸಿದೆ.
‘‘ ಒಂದು ವೇಳೆ ಅವರಿಗೆ ವಿವಾಹ ಬಂಧನಕ್ಕೆ ಪ್ರವೇಶಿಸಲು ಸಾಧ್ಯವಾಗದೇ ಇದ್ದರೆ, ವಿವಾಹ ಬಂಧನದ ಹೊರಗೆ ಅವರು ಲೀವ್-ಇನ್ ಸಂಬಂಧ ಇರಿಸಿಕೊಳ್ಳಬಹುದು’’ ಎಂದು ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಮಹಿಳೆ ರಕ್ಷಣೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ-2005ರ ಅಡಿಯಲ್ಲಿ ‘ಲೀವ್-ಇನ್ ಸಂಬಂಧವನ್ನು’ ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.







