ಕೆಪಿಸಿಸಿ ಅಧ್ಯಕ್ಷರ ವಿರುದ್ಧದ ಹೇಳಿಕೆಗೆ ಈಗಲೂ ಬದ್ಧ: ಸಾಹಿತಿ ಕೆ.ಬಿ ಸಿದ್ದಯ್ಯ

ತುಮಕೂರು,ಮೇ.06: ದಲಿತ ಸಾಂಸ್ಕೃತಿಕ ಸಂಶೋಧನಾ ಕೇಂದ್ರದ ವತಿಯಿಂದ ಕೊರಟಗೆರೆ ಕ್ಷೇತ್ರದ ಅಧ್ಯಯನ ಮತ್ತು ಸಮೀಕ್ಷೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ನಾನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ವಿರುದ್ದ ಪ್ರಚಾರಕ್ಕೆ ಬಂದಿದ್ದೇನೆ ಎಂದು ತಪ್ಪು ತಿಳಿದು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅವರೆಲ್ಲರೂ ಅಮಾಯಕರಾದ ಕಾರಣ ಅವರ ಮೇಲೆ ಪೊಲೀಸ್ ಕೇಸು ದಾಖಲಿಸದೆ ಕ್ಷಮಿಸಿರುವುದಾಗಿ ಸಾಹಿತಿ ಕೆ.ಬಿ.ಸಿದ್ದಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕುಡಿದ ಮತ್ತಿನಲ್ಲಿ ಕೆಲವರು ನನ್ನ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ನಾನು ಅವರಿಂದ ಬಿಡಿಸಿಕೊಳ್ಳಲು ಗೆಲಿಲಿಯೋ ತಂತ್ರ ಅನುಸರಿಸಬೇಕಾಯಿತು. ಈಗಲೂ ನನ್ನ ನಿಲುವು ಸ್ಪಷ್ಟವಿದೆ. ಈ ಹಿಂದೆ ಹೇಳಿರುವ ಕಾಂಗ್ರೆಸ್‍ಗೆ ಮತ ನೀಡಿ, ಆದರೆ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿ ಎಂಬ ಹೇಳಿಕೆಗೆ ಬದ್ದನಾಗಿದ್ದೂ, ಮುಂದೆಯೂ ಬದ್ದನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ, ಒಂದು ಸಮುದಾಯದ ಮುಖಂಡನಾಗಿ ಟಿಕೆಟ್ ಹಂಚಿಕೆ ವೇಳೆ ಉಪಪಂಗಡಗಳಲ್ಲಿ ತಾರತಮ್ಯ ನಡೆಸಿರುವುದು ಖಂಡನೀಯ. ಇದರಿಂದ ಮಾದಿಗರಿಗೆ ಅನ್ಯಾಯವಾಗಿದೆ. ಅದ್ದರಿಂದ ಡಾ.ಜಿ.ಪರಮೇಶ್ವರ್ ಅವರಿಗೆ ಮತ ಹಾಕಬೇಡಿ ಎಂಬುದು ನನ್ನ ಕೋರಿಕೆ. ಉಳಿದಂತೆ ಕೋಮುವಾದಿ ಪಕ್ಷವಾಗಿರುವ ಬಿಜೆಪಿಗೆ ಮತ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾದಿಗ ಮತದಾರರು ಕೋಮುವಾದಿ ಬಿಜೆಪಿ ಮತ್ತು ಒಳಮೀಸಲಾತಿ ವಿರೋಧಿ ಡಾ.ಜಿ.ಪರಮೇಶ್ವರ್ ಹೊರತುಪಡಿಸಿ ಯಾರಿಗೆ ಬೇಕಾದರೂ ಮತ ನೀಡಲಿ. ಒಂದು ವೇಳೆ ಜೆಡಿಎಸ್‍ನ ಅಭ್ಯರ್ಥಿಗಳು ಒಳಮೀಸಲಾತಿ ವಿರೋಧಿಸಿದ್ದರೆ ಅವರಿಗೂ ಮತ ನೀಡುವುದು ಬೇಡ ಎಂಬುದು ನನ್ನ ಕೋರಿಕೆ ಎಂದು ಕೆ.ಬಿ.ಸಿದ್ದಯ್ಯ ತಿಳಿಸಿದರು.
ಮೀಸಲು ಕ್ಷೇತ್ರವಾಗಿರುವ ಕೊರಟಗೆರೆಯಲ್ಲಿ ಗಲಭೆ ಸೃಷ್ಟಿಸಿ, ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಕೆಲವನ್ನು ಕೆಲವರು ಮಾಡುತ್ತಿದ್ದು, ಇದಕ್ಕೆ ನನ್ನ ವಿರೋಧವಿದೆ. ಕ್ಷೇತ್ರದಲ್ಲಿ ಶಾಂತಿ ಮತ್ತು ಭಯಮುಕ್ತ ವಾತಾವರಣ ಸೃಷ್ಟಿಯಾಗಬೇಕು ಎಂದು ಒತ್ತಾಯಿಸಿ, ಚುನಾವಣೆಗೂ ಮುನ್ನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೆ.ಬಿ.ಸಿದ್ದಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಬಿ.ಸಿದ್ದಯ್ಯ ಅವರ ಶಿಷ್ಯರಾದ ರಂಗಧಾಮಯ್ಯ, ರಾಮಾಂಜೀನಪ್ಪ,ಮೂರ್ತಿ,ಮತ್ತಿತರರು ಉಪಸ್ಥಿತರಿದ್ದರು.







