ಚುನಾವಣಾ ಕರ್ತವ್ಯ ಲೋಪದ ಆರೋಪ: ದಾವಣಗೆರೆ ತಹಶೀಲ್ದಾರ್ ಅಮಾನತು
ದಾವಣಗೆರೆ,ಮೇ.06: ಚುನಾವಣಾ ಕರ್ತವ್ಯ ಲೋಪದ ಆರೋಪದಡಿ 108-ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ದಾವಣಗೆರೆ ತಹಶೀಲ್ದಾರ್ ರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಶನಿವಾರ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ತಹಶೀಲ್ದಾರ್, ಮಾಯಕೊಂಡ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಸಿ.ಕಾಂತರಾಜ್ ಅಮಾನತುಗೊಂಡ ಅಧಿಕಾರಿ. ಇವಿಎಂ ಯಂತ್ರಗಳ 275 ಕಂಟ್ರೋಲ್ ಯೂನಿಟ್‍ಗಳ ಪಿಂಕ್ ಸೀಲ್ ತೆಗೆದಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಚುನಾವಣಾ ವೀಕ್ಷಕರು ಕರೆದೊಯ್ದಿದ್ದು, ತಾಲೂಕು ಕಚೇರಿಯಿಂದ ಅಳುತ್ತಲೇ ಕಾಂತರಾಜ್ ಹೆಜ್ಜೆ ಹಾಕಿದರು ಎನ್ನಲಾಗಿದೆ.
ಮಾಯಕೊಂಡ ಕ್ಷೇತ್ರದ ಇವಿಎಂ ಯಂತ್ರಗಳನ್ನು ರ್ಯಾಂಡಮೈಜೇಷನ್ ಮಾಡುವ ಪ್ರಕ್ರಿಯೆಯಲ್ಲಿ ಹಂಚಿಕೆಯಾಗಿದ್ದ 275 ಕಂಟ್ರೋಲ್ ಯೂನಿಟ್‍ಗಳ ಪಿಂಕ್ ಸೀಲ್ ತೆಗೆದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧೀಕಾರಿ ಡಿ.ಎಸ್. ರಮೇಶ್ ತಕ್ಷಣದಿಂದಲೇ ಜಾರಿಗೊಳ್ಳುವಂತೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕಾಂತರಾಜ್ ರನ್ನು ಅಮಾನತುಗೊಳಿಸಿದ್ದಾರೆ.





