ದಲಿತರು ಕೋಮುವಾದಿಗಳನ್ನು ದೂರ ಇಡಬೇಕಿದೆ: ಮಲ್ಲಿಕಾರ್ಜುನ ಖರ್ಗೆ

ಮೈಸೂರು,ಮೇ.6: ದೇಶದ ಸಂವಿಧಾನಕ್ಕೆ ಗಂಡಾಂತರ ಬಂದಿದ್ದು, ದಲಿತರು ಒಗ್ಗಟ್ಟಾಗುವ ಮೂಲಕ ಕೋಮುವಾದಿಗಳನ್ನು ದೂರ ಇಡಬೇಕಿದೆ ಎಂದು ಲೋಕಸಭೆ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ದಲಿತರಿಗೆ ಕರೆ ನೀಡಿದರು.
ಕಾಂಗ್ರೆಸ್ ಪರವಾಗಿ ರವಿವಾರ ನಗರದ ಅಶೋಕಪುರಂ ಮತ್ತು ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಹಾಗೂ ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಸಚಿವ ತನ್ವೀರ್ ಸೇಠ್ ಪರ ಮತಯಾಚಿಸಿದರು. ಇದೇ ವೇಳೆ ಮಾತನಾಡಿದ ಅವರು, ಕೋಮುವಾದಿಗಳು ಸಂವಿಧಾನದ ಬದಲಾವಣೆಯ ಮಾತನಾಡುತ್ತಿದ್ದಾರೆ. ಅವರ ಬಣ್ಣ ನಾಲ್ಕೇ ವರ್ಷದಲ್ಲಿ ಬಯಲಾಗಿದೆ. ಕೋಮುವಾದಿಗಳ ಕುತಂತ್ರಕ್ಕೆ ದಲಿತರು ಮಣಿಯಬಾರದು, ಕೋಮುವಾದ ಮತ್ತು ಜಾತ್ಯಾತೀತ ವಾದದ ನಡುವೆ ಚುನಾವಣೆ ನಡೆಯುತ್ತಿದ್ದು, ಕೋಮುವಾದಿಗಳಿಗೆ ದಲಿತರು ಬೆಂಬಲ ನೀಡಬಾರದು ಎಂದು ಹೇಳಿದರು.
ಸಂವಿಧಾನ ರಕ್ಷಣೆ ಮಾಡುವುದು ಈ ದೇಶದ ಪ್ರತಿಯೊಬ್ಬರ ಕರ್ತವ್ಯ. ಆದರೆ ಬಿಜೆಪಿಯವರು ಅದನ್ನು ಬದಲಾಯಿಸುವ ಕುತಂತ್ರ ನಡೆಸುತ್ತಿದ್ದಾರೆ. ದಲಿತರು, ಅಲ್ಪಸಂಖ್ಯಾತರು ನೆಮ್ಮದಿ ಜೀವನ ನಡೆಸಲು ಬಿಡುತ್ತಿಲ್ಲ. ಅವರ ಅಜೆಂಡಾ ಹಿಂದೂತ್ವವನ್ನು ಹೇರುವುದು. ಇದಕ್ಕೆ ದಲಿತರು ಅವಕಾಶ ನೀಡಬಾರದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾರ ಕಲ್ಯಾಣ ಕಾಂಗ್ರೆಸ್ ಬಿಟ್ಟರೆ ಬೇರೆ ಯಾರಿಂದಲು ಸಾಧ್ಯವಿಲ್ಲ ಎಂದು ಹೇಳಿದರು.
ಮೋದಿ ಕರ್ನಾಟಕಕ್ಕೆ ಎಷ್ಟೇ ಬಾರಿ ಬಂದರೂ ಅವರ ಆಟ ನಡೆಯುವುದಿಲ್ಲ, ಇನ್ನು ಅಮಿತ್ ಶಾ ಗಿಮಿಕ್ ಕೂಡ ಇಲ್ಲಿ ನಡೆಯುವುದಿಲ್ಲ. ಇಲ್ಲಿನ ಜನ ಪ್ರಬುದ್ದರು. ಅವರು ಎಲ್ಲಾ ಆಯಾಮಗಳನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಒತ್ತಮ ಬೆಂಬಲ ದೊರಕುತ್ತಿದ್ದು, ದಲಿತರು ತಮ್ಮ ಮತಗಳು ಹಂಚಿಹೋಗದಂತೆ ನೋಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ಶಾಸಕ ಎಂ.ಕೆ.ಸೋಮಶೇಖರ್, ಸಚಿವ ತನ್ವೀರ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಭಾಸ್ಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎನ್.ಮೂರ್ತಿ, ಮಾಜಿ ಮೇಯರ್ ಪುರುಷೋತ್ತಮ್, ಕಾಂಗ್ರೆಸ್ ಮುಖಂಡರಾದ ಮಲ್ಲಿಗೆ ವೀರೇಶ್, ಎಚ್.ಎ.ವೆಂಕಟೇಶ್, ಶೌಖತ್ ಅಲಿಖಾನ್, ಸೋಮಶೇಖರ್, ಶಿವಮಾದು ಸೇರಿದಂತೆ ಹಲವರು ಜೊತೆಯಲ್ಲಿದ್ದರು.







