ಮತದಾರರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ: ಶ್ರೀಕರ ಪ್ರಭು

ಮಂಗಳೂರು, ಮೇ 6: ಮತದಾರರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ. ಮೊನ್ನೆ ಮೊನ್ನೆ ಬಂದವರಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ತಿಳಿಸಿದ್ದಾರೆ.
ನಗರದ ಸಿ.ವಿ ನಾಯಕ್ ಹಾಲ್‌ನಲ್ಲಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಮಹಿಳಾ ಸಮಾವೇಶವನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು. ನಾನು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ಸಂದರ್ಭ ಸಾಕಷ್ಟು ಜನರಿಗೆ ನನ್ನ ವೈಯಕ್ತಿಕ ನೆಲೆಯಿಂದ ಸಹಾಯ ಮಾಡಿದ್ದೇನೆ. ಅವರೆಲ್ಲರೂ ನನ್ನನ್ನು ಬೆಂಬಲಿಸುತ್ತಿದ್ದಾರೆ. ಆದರೆ ನಾನು ಚುನಾವಣೆಯಲ್ಲಿ ನಿಲ್ಲುತ್ತೇನೆ, ಅವರು ನನಗೆ ಮತ ಹಾಕಲಿ ಎಂಬ ನಿರೀಕ್ಷೆಯಿಂದ ಎಂದು ಅವರು ಹೇಳಿದರು.
ಸಂಸದರಾಗುವ ಅರ್ಹತೆಯಿರುವ ಅಭ್ಯರ್ಥಿ ಶ್ರೀಕರ ಪ್ರಭು
ಶ್ರೀಕರ ಪ್ರಭು ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದವರು. ಆದರೂ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ್ದಾರೆ. ಬಿಜೆಪಿಯಿಂದ ಅವರನ್ನು ಉಚ್ಛಾಟಿಸಿದ ಬಳಿಕ ಶ್ರೀಕರ ಪ್ರಭುವನ್ನು ಬಿಜೆಪಿಯ ಬಂಡಾಯ ಅಭ್ಯರ್ಥಿ ಎನ್ನುವ ನೈತಿಕ ಹಕ್ಕು ಬಿಜೆಪಿಯವರಿಗಿಲ್ಲ. ಶ್ರೀಕರ ಪ್ರಭು ಸ್ವತಂತ್ರ ಅಭ್ಯರ್ಥಿ ಎಂದು ಹೇಳಬೇಕಾಗಿದೆ. ಅವರು ಬಿಜೆಪಿಯ ವಿವಿಧ ಹುದ್ದೆಯಲ್ಲಿ ದುಡಿದು ಸಂಸತ್ ಸದಸ್ಯರಾಗುವ ಅರ್ಹತೆಯಿರುವ ವ್ಯಕ್ತಿ ಎಂದು ಮಹಿಳಾ ಸಮಾವೇಶದಲ್ಲಿ ಮಹಿಳಾ ಮುಖಂಡರಾದ ಪ್ರಸನ್ನ ರವಿ ತಿಳಿಸಿದ್ದಾರೆ.
ಮೋದಿಯ ಮುಖ ನೋಡಿ ಬಿಜೆಪಿಗೆ ಮತ ಹಾಕಿ ಎನ್ನುವ ಬಿಜೆಪಿಯವರು ಪಕ್ಷದಿಂದ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಿದ್ದಾರೆ. ಬಿಜೆಪಿ ಯಲ್ಲಿ ಪ್ರಮಾಣಿಕವಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಕೆಜೆಪಿ ಯಿಂದ ಬಂದವರು, ಜೆಡಿಎಸ್‌ನಿಂದ ಬಂದವರು ಆಗುತ್ತದೆ. ಚುನಾವಣೆ ಬಂದಾಗ ಧರ್ಮ, ಹಿಂದುತ್ವ ಬಿಜೆಪಿಯವರಿಗೆ ನೆನಪಾಗುತ್ತದೆ. ಯಾರದೋ ಅಡಿಯಾಳು ಆಗಿ ಕೆಲಸ ಮಾಡುವ ಅಭ್ಯರ್ಥಿ ನಮಗೆ ಬೇಡ ಎಂದು ಪ್ರಸನ್ನ ರವಿ ಶ್ರೀಕರ ಪ್ರಭುವನ್ನು ಬೆಂಬಲಿಸಿ ಮಾತನಾಡಿದರು.
ಮೋದಿ ವೇಷಧಾರಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ:- ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳಲ್ಲಿ ಅವರಂತೆ ವೇಷ ಧರಿಸಿ ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೋದಿಯಂತೆ ಹೋಲಿಕೆ ಇರುವ ಮಂಗಳೂರಿನ ವಸಂತ ಪ್ರಭು ಶನಿವಾರ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ರವಿವಾರ ಮಂಗಳೂರು ದಕ್ಷಿಣ ವಿಧಾನ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಬೆಂಬಲಿಗರ ಸಭೆಯಲ್ಲಿ ಕಾಣಿಸಿಕೊಂಡರು.
ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಶ್ರೀಕರ ಪ್ರಭುವನ್ನು ಗೆಲ್ಲಿಸಿ ಬಿಜೆಪಿಯಿಂದ ಅವರನ್ನು ಉಚ್ಛಾಟಿಸಿ ಶ್ರೀಕರ ಪ್ರಭುವಿಗೆ ಅನ್ಯಾಯವಾಗಿದೆ ಎಂದು ಕೆ.ಪಿ.ಶೆಟ್ಟಿ ತಿಳಿಸಿದರು.
ಸಮಾವೇಶದಲ್ಲಿ ಚಿತ್ರಕಲಾ ,ಶ್ರೀಲತಾ ಗೊಪಾಲಕೃಷ್ಣ,ಗೀತಾ ಪಿ.ಶೆಟ್ಟಿ,ವೀಣಾ ಸುರೇಶ್, ಜ್ಯೋತಿ ಶೆಟ್ಟಿ, ಪ್ರಸನ್ನ ರವಿ, ಸುಲಕ್ಷಣ ಪ್ರಭು, ದಿವ್ಯಶ್ರೀ, ಮಾಯಾನಾಯಕ್, ಉಮಾವತಿ ಮಂಜುಳಾ ಬಿ,ಕೆ.ವಿ.ವಿಜಯ ಪ್ರಭು,ಕೆ.ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







