ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ: ಡಿ.ವಿ.ಸದಾನಂದಗೌಡ

ಮೈಸೂರು,ಮೇ.6: ಮೈಸೂರು ಜಿಲ್ಲೆಗೆ ಸಂಬಂಧಿಸಿದ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮೈಸೂರಿನಲ್ಲಿ ಬಿಡುಗಡೆ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಲವಾರು ಪಕ್ಷಗಳಿಗೆ ಪ್ರಣಾಳಿಕೆ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆ ಮುಂದಿನ ಐದು ವರ್ಷದ ದಿಕ್ಸೂಚಿ ಇದ್ದ ಹಾಗೆ. ಬಿಜೆಪಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯ ಎಲ್ಲಾ ಯೋಜನೆಗಳನ್ನು ಈಡೇರಿಸಿದ್ದೇವೆ. ಈ ಬಾರಿ ಬಿಜೆಪಿ ಪ್ರಣಾಳಿಕೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ, ನರಸಿಂಹರಾಜ ವಿಧಾನಸಭಾ ಕ್ಷೇತ್ರ, ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಇದೇ ವೇಳೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಸ್ವತಂತ್ರವಾಗಿ ಅಗತ್ಯ ಬಹುಮತ ಗಳಿಸಲಿದೆ. ಪ್ರಧಾನಿ ಪ್ರಚಾರದಿಂದ 3% ಓಟ್ ಬಿಜೆಪಿಗೆ ಹೆಚ್ಚಾಗಲಿದೆ. ಇದರಿಂದ ಬಿಜೆಪಿಗೆ 25 ಸೀಟ್ ಹೆಚ್ಚಾಗಲಿದೆ ಎಂದರು.
ನಮ್ಮ ಪಕ್ಷದ ಪ್ರಣಾಳಿಕೆ ಅಂದರೆ ಭಗವದ್ಗೀತೆ ಇದ್ದಹಾಗೆ. ಎಲ್ಲಾ ಪಕ್ಷಗಳು ಸಹಜವಾಗಿಯೇ ಚುನಾವಣಾ ಪ್ರಣಾಳಿಕೆ ಮಾಡೋದು ಸಹಜ. ಅಂತೆಯೇ ಕಳೆದ ಲೋಕಸಭಾ ಚುನಾವಣೆ ವೇಳೆ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಿದ್ದೇವೆ. ಇಲ್ಲಿ ಸ್ವಚ್ಛತೆ, ಪ್ರವಾಸಿ, ಹಳೆ ಇತಿಹಾಸ ಪ್ರಸಿದ್ಧ ಕಟ್ಟಡಗಳ ಉಳಿಸಿಕೊಳ್ಳುವುದು ಸೇರಿದಂತೆ ಹಲವು ಅಂಶಗಳು ಇದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಬೇರೆ ಪಕ್ಷಗಳ ಜತೆ ಮೈತ್ರಿಯಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಒಬ್ಬ ಕಳ್ಳ ಪಿಕ್ ಪಾಕೇಟ್ ಮಾಡಿ, ಚೈನ್ ಕದ್ದು ಬೇರೆಯವನ ಕಡೆ ಕೈ ತೋರಿಸಿ ಕಳ್ಳ ಕಳ್ಳ ಅಂತಾನೆ. ಹಾಗೇ ಅವರು ಮಾಡಿಕೊಂಡಿರುವ ಒಳ ಒಪ್ಪಂದವನ್ನು ನಮ್ಮ ಬಗ್ಗೆ ಹೇಳುತ್ತಾರೆ ಎಂದರು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಡಾ.ಬಿ.ಮಂಜುನಾಥ್, ಮಹೇಶ್ ರಾಜೇ ಅರಸ್, ಯಶಸ್ವಿನಿ ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







