ಊರು, ಜಾತಿ, ಸಂಬಂಧಗಳಿಗಾಗಿ ಮತ ನೀಡಬೇಡಿ, ನನ್ನ ಹೋರಾಟಕ್ಕೆ, ಪಕ್ಷದ ನಿಲುವುಗಳಿಗೆ ಮತ ನೀಡಿ: ಮುನೀರ್ ಕಾಟಿಪಳ್ಳ

ಮಂಗಳೂರು, ಮೇ 7: ನಾಲ್ಕೈದು ದಿನಗಳಲ್ಲಿ ಚುನಾವಣಾ ದಿನಾಂಕ ಬರಲಿದೆ. ಈ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ಆಳುವ ಶಕ್ತಿಗಳು ನಮ್ಮ ಬದುಕಿನ ರಾಜಕಾರಣದ ತೀರ್ಮಾನಗಳನ್ನು ಜನವಿರೋಧಿಯಾಗಿ ಪರಿವರ್ತಿಸುವ ಅಪಾಯ ಈ ದಿನಗಳಲ್ಲಿ ಹೆಚ್ಚಿನದಾಗಿರುತ್ತದೆ. ನನ್ನ ಹೆಸರಿನ ಜೊತೆಯಲ್ಲಿ ಕಾಟಿಪಳ್ಳ ಎಂದು ನಿಮ್ಮ ಊರಿನ ಹೆಸರು ಇರುವ ಕಾರಣಕ್ಕಾಗಿಯೋ ಮುನೀರ್ ನಮಗೆ ಪರಿಚಿತ, ನಮ್ಮ ಊರಿನವನು, ನಮ್ಮ ಸಂಬಂಧಿಕ ಅನ್ನುವ ಕಾರಣಕ್ಕೆ ಮತ ಚಲಾಯಿಸಬೇಡಿ. ನನ್ನ ಈವರೆಗಿನ ಹೋರಾಟಗಳು, ತಿಳುವಳಿಕೆ, ರಾಜಕೀಯ ಪ್ರಜ್ಞೆಗಳನ್ನು ನೋಡಿ, ನನ್ನ ಪಕ್ಷದ ನಿಲುವುಗಳನ್ನು ನೋಡಿ ನನಗೆ ಮತ ಚಲಾಯಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ರವಿವಾರ ಕಾಟಿಪಳ್ಳ ಜಂಕ್ಷನ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಜನರು ಅಪಾರ ನಿರೀಕ್ಷೆಯನ್ನಿಟ್ಟು ನರೇಂದ್ರ ಮೋದಿಯವರನ್ನು ವಿಕಾಸ ಪುರುಷ ಎಂದು ಬಗೆದು ಬಹುಮತದಿಂದ ಗೆಲ್ಲಿಸಿದರು. ಆದರೆ ಮೋದಿ ಚುನಾವಣಾ ಸಮಯದಲ್ಲಿ ನೀಡಿದ ಯಾವ ಆಶ್ವಾಸನೆಯನ್ನೂ ನೆರವೇರಿಸಲಿಲ್ಲ. ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರುಪಾಯಿಗಳನ್ನು ಜಮೆ ಮಾಡುವ ಆಶ್ವಾಸನೆಯಾಗಲೀ ಪ್ರತಿ ವರ್ಷ 2 ಕೋಟಿಗಳಷ್ಟು ಉದ್ಯೋಗಾವಕಾಶ ಸೃಷ್ಟಿಸುವುದಾಗಲೀ ಅವರು ಮಾಡಲಿಲ್ಲ. ಉದ್ಯೋಗವನ್ನು ಕೊಡುವುದಿರಲಿ, ಅವರ ಆರ್ಥಿಕ ನೀತಿಗಳಿಂದಾಗಿ ಇರುವ ಉದ್ಯೋಗ ಗಳಲ್ಲಿಯೂ ಕಡಿತ ಉಂಟಾಗಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.
ರೈತರಿಗೆ, ಕಾರ್ಮಿಕರ ಜೀವನ ಮಟ್ಟ ಸುಧಾರಣೆಗೆ ಯಾವ ಕ್ರಮವನ್ನೂ ಕೈಗೊಳ್ಳದ ಮೋದಿ ಸರ್ಕಾರ ಶ್ರೀಮಂತ ಉದ್ಯಮಿಗಳಿಗೆ ರಿಯಾಯಿತಿ ನೀಡುವ ಮೂಲಕ ತನ್ನ ಜನವಿರೋಧಿ ನೀತಿಯನ್ನು ಸಾಬೀತುಪಡಿಸುತ್ತಿದೆ. ರಾಜ್ಯದಲ್ಲಿಯೂ ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗಳು ಹಾಗೂ ಜನ ಸಾಮಾನ್ಯರ ಪ್ರಶ್ನೆಗಳಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಕೇಂದ್ರದಲ್ಲಿ ಬಿಜೆಪಿ ಬರುವ ಮುನ್ನ 10 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೂಡಾ ಜನಪರವಾದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ಎಂದು ದೂರಿದ ಮುನೀರ್ ಕಾಟಿಪಳ್ಳ, ಕೇಂದ್ರದಲ್ಲಿ 5 ವರ್ಷಗಳ ಕಾಲ ನಮ್ಮ ಸಿಪಿಐಎಂ ಪಕ್ಷ ಯಾವುದೇ ಲಾಭಾಪೇಕ್ಷೆಯಿಲ್ಲದೆ, ಒಂದು ಮಂತ್ರಿ ಪದವಿಯನ್ನೂ ಕೇಳದೆ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದೆವು. ಇಂದು ಸಿಪಿಐಎಂ ಅಭ್ಯರ್ಥಿಗಳು ಮತ ಒಡೆಯುತ್ತಾರೆ ಎಂದು ದೂರುತ್ತಿರುವವರು ಇದನ್ನು ನೆನಪಿನಲ್ಲಿ ಇಡಬೇಕು ಎಂದು ಹೇಳಿದರು.
ಹಣವಂತ ರಾಜಕಾರಣಿಗಳ ಹಿಂದೆ ಹೋಗುವುದರ ಅಪಾಯದ ಬಗ್ಗೆ ಎಚ್ಚರಿಸುತ್ತಾ ಮಾತನಾಡಿದ ಮುನೀರ್ ಕಾಟಿಪಳ್ಳ, ಇನ್ನೇನು ಪವಿತ್ರ ರಂಝಾನ್ ತಿಂಗಳು ಆರಂಭವಾಗಲಿದೆ. ನಾವೆಲ್ಲ ಖಲೀಫರ ಕಥೆಯನ್ನು ಕೇಳುತ್ತಲೇ ಬೆಳೆದಿದ್ದೇವೆ. ಹಬ್ಬದ ಸಂದರ್ಭದಲ್ಲಿ ಖಲೀಫ ಹರಿದ ಪೋಷಾಕನ್ನು ಹೊಲಿಯುತ್ತಾ ಕುಳಿತಿರುತ್ತಾನೆ. ಇಷ್ಟು ದೊಡ್ಡ ಶ್ರೀಮಂತ ಹೊಸ ಪೋಷಾಕನ್ನು ತೆಗೆದುಕೊಳ್ಳಬಾರದೇ ಎಂದು ಕೇಳಿದಾಗ ಆ ಖಜಾನೆ ನನ್ನದಲ್ಲ, ಅದನ್ನು ಮುಟ್ಟುವ ಹಕ್ಕು ನನಗಿಲ್ಲ. ಅದನ್ನು ನಾನು ಮುಟ್ಟಿದರೆ ನಾಳೆ ಅಲ್ಲಿ ನಾನು ಉತ್ತರಿಸಬೇಕಾಗುತ್ತದೆ ಅನ್ನುತ್ತಾರೆ ಖಲೀಫ. ಈ ಕಥೆಯನ್ನು ಕೇಳಿ ರೋಮಾಂಚನಗೊಂಡು ಬೆಳೆದವರು ನಾವು. ಅಂಥವರ ಕತೆಗಳನ್ನು ಓದುತ್ತೀರಿ, ಆದರ್ಶವನ್ನು ಮೆಚ್ಚುತ್ತೀರಿ. ಹೀಗಿರುವಾಗ ದುಡ್ಡನ್ನು ಮುಂದಿಟ್ಟು ಗೆಲ್ಲುವಂಥ ಕಪ್ಪುಹಣದ ಕುಬೇರನ ಜೊತೆ ನೀವು ರಾಜಕಾರಣಕ್ಕೆ ಹೋಗಿಬಿಟ್ಟರೆ ಆದರ್ಶ ಉಳಿಯುತ್ತದೆಯೇ ? ಎಂದು ಮುನೀರ್ ಕಾಟಿಪಳ್ಳ ಪ್ರಶ್ನಸಿದರು.
ನಾನು ಅಷ್ಟು ದೊಡ್ಡ ವ್ಯಕ್ತಿಯಾಗಲು ಸಾಧ್ಯವಿಲ್ಲ. ಆದರೆ ಅಂಥವರ ದಾರಿಯಲ್ಲಿ ಹೆಜ್ಜೆಯಿಟ್ಟು ನಡೆಯಲು ಬಯಸುವವನು ರಾಜಕೀಯಕ್ಕಾಗಿ ತ್ಯಾಗ ಮಾಡಬೇಕು ಎಂದು ಬಂದಿರುವವನು. ಕಳೆದ 17 ವರ್ಷಗಳಿಂದ ಸಾಮಾಜಿಕ ಬದುಕಿನಲ್ಲಿ ನನ್ನ ಸಂಪಾದನೆ ಕೆಲವು ಪೊಲೀಸ್ ಕೇಸುಗಳು, ಪೊಲೀಸರಿಂದ ಹೊಡೆತ ತಿಂದ ಗುರುತುಗಳು, ಕೋರ್ಟ್ ಕಚೇರಿ ಅಲೆದಾಟ ಇಷ್ಟೇ ಮತ್ತು ಈ ಆಸ್ತಿಯನ್ನು ನಾನು ಸಂಪಾದಿಸಿದ್ದು ಜನರಿಗಾಗಿಯೇ. ಈ ಅರ್ಹತೆಯ ಮೇಲೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನೀವು ಕೂಡಾ ಇದೇ ಆಧಾರದ ಮೇಲೆ ನನಗೆ ಮತ ನೀಡಬೇಕಾಗಿ ವಿನಂತಿಸುತ್ತೇನೆ ಎಂದು ಮುನೀರ್ ಕಾಟಿಪಳ್ಳ ಸಭಿಕರಲ್ಲಿ ಮತ ಯಾಚಿಸಿದರು.







