ಎಸೆಸೆಲ್ಸಿ ಫಲಿತಾಂಶ: ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನದಲ್ಲಿ ಉಡುಪಿ ಜಿಲ್ಲೆ
ಉಡುಪಿ, ಮೇ 7: ಇಂದು ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ, ಕಳೆದ ವರ್ಷ ಪಡೆದ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ 2010ರ ನಂತರ ನಾಲ್ಕನೇ ಬಾರಿಗೆ ರಾಜ್ಯದ ಅಗ್ರಗಣ್ಯ ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಭಾಜನವಾಯಿತು.
ಕಳೆದ ವರ್ಷ 84.23ಶೇ. ಉತ್ತೀರ್ಣತೆಯೊಂದಿಗೆ ಅಗ್ರಸ್ಥಾನ ಪಡೆದ ಉಡುಪಿ ಇಂದು 88.18ಶೇ. ಫಲಿತಾಂಶದೊಂದಿಗೆ ಅದೇ ಸ್ಥಾನದಲ್ಲಿ ಉಳಿಯಿತು. ಉಡುಪಿ ಜಿಲ್ಲೆ ಈ ಮೊದಲು 2012 ಹಾಗೂ 2015ರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿತ್ತು.
ಈವರೆಗೆ ಸಿಕ್ಕಿದ ಮಾಹಿತಿಗಳಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 38 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಇವುಗಳಲ್ಲಿ ಸರಕಾರಿ ಪ್ರೌಢ ಶಾಲೆಗಳು, ಎರಡು ಅನುದಾನಿತ ಪ್ರೌಢ ಶಾಲೆಗಳು ಹಾಗೂ 26 ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿವೆ ಎಂದು ಡಿಡಿಪಿಐ ಶೇಷಶಯನ್ ಅವರು ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆ ಬರೆದ 13,185 ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 11,642 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 6598 ಬಾಲಕರಲ್ಲಿ 5636 ಮಂದಿ ತೇರ್ಗಡೆಗೊಂಡಿದ್ದರೆ (ಶೇ.85.42) ಹಾಗೂ 6587 ಬಾಲಕಿಯರಲ್ಲಿ 6006 ಮಂದಿ ಉತ್ತೀರ್ಣರಾಗಿ ಶೇ.91.18 ಫಲಿತಾಂಶ ಬಂದಿದೆ. ಇನ್ನುಳಿದಂತೆ ಶೇ.32.16ರಷ್ಟು ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಗೊಂಡಿ ದ್ದರೆ, ಶೇ.8.44ರಷ್ಠು ಖಾಸಗಿ ಹಾಗೂ ಶೇ.15.75 ಖಾಸಗಿ ಪುನರಾರ್ವತಿತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದವರು ನುಡಿದರು.
ಸರಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆದ 5863 ವಿದ್ಯಾರ್ಥಿಗಳಲ್ಲಿ 5028 ಮಂದಿ (ಶೇ.85.75) ಪಾಸಾಗಿದ್ದಾರೆ. ಇವರಲ್ಲಿ ಬಾಲಕರು ಶೇ.82.4 ಹಾಗೂ ಬಾಲಕಿಯರು ಶೇ.89ರಷ್ಟು ತೇರ್ಗಡೆಯಾಗಿದ್ದಾರೆ. ಇನ್ನು ಅನುದಾನಿತ ಶಾಲೆಗಳಲ್ಲಿ 3429 ವಿದ್ಯಾರ್ಥಿಗಳಲ್ಲಿ 2908 ಮಂದಿ (ಶೇ.84.80) ತೇರ್ಗಡೆಯಾಗಿದ್ದಾರೆ. ಇಲ್ಲಿ ಬಾಲಕರು ಶೇ.81.84 ಹಾಗೂ ಬಾಲಕಿಯರು ಶೇ.87.82ರಷ್ಟು ಪಾಸಾಗಿದ್ದಾರೆ.
ಅನುದಾನ ರಹಿತ ಶಾಲೆಗಳಲ್ಲಿ 3893 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 3706 ಮಂದಿ (ಶೇ.95.17)ತೇರ್ಗಡೆಗೊಂಜಡಿದ್ದಾರೆ. ಬಾಲಕರು ಶೇ. 92.91 ಹಾಗೂ ಬಾಲಕಿಯರು ಶೇ.97.58ರಷ್ಟು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯ ಎರಡು ಸರಕಾರಿ ಹಾಗೂ ಒಂದು ಅನುದಾನಿತ ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶವನ್ನು ಪಡೆದಿವೆ. 84 ಸರಕಾರಿ, 49 ಅನುದಾನಿತ ಹಾಗೂ 73 ಅನುದಾನ ರಹಿತ ಶಾಲೆಗಳು ಶೇ.80ರಿಂದ 100ರಷ್ಟು ಫಲಿತಾಂಶವನ್ನು ಪಡೆದಿದ್ದರೆ, 22 ಸರಕಾರಿ, 19 ಅನುದಾನಿತ, 4 ಅನುದಾನ ರಹಿತ ಶಾಲೆಗಳು ಶೇ.60ರಿಂದ 80ರಷ್ಟು, 3 ಸರಕಾರಿ, ಮೂರು ಅನುದಾನಿತ ಹಾಗೂ ಒಂದು ಅನುದಾನ ರಹಿತ ಶಾಲೆಗಳು ಶೇ.40ರಿಂದ 60ರಷ್ಟು ಫಲಿತಾಂಶವನ್ನು ಪಡೆದಿವೆ. ಜಿಲ್ಲೆಯ 1086 ವಿದ್ಯಾರ್ಥಿಗಳು ಶೇ.90ರಿಂದ 100, 2716 ವಿದ್ಯಾರ್ಥಿಗಳು ಶೇ.80ರಿಂದ 90, 3282 ವಿದ್ಯಾರ್ಥಿಗಳು ಶೇ.70ರಿಂದ 80, 2844 ವಿದ್ಯಾರ್ಥಿಗಳು ಶೇ.60ರಿಂದ 70, 1529 ವಿದ್ಯಾರ್ಥಿಗಳುಇ ಶೇ.50ರಿಂದ 60 ಹಾಗೂ 185 ಮಂದಿ ಶೇ.35ರಿಂದ 50ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಕ್ರೀಡಾ ವಸತಿ ನಿಲಯಕ್ಕೆ ಶೇ.100 ಫಲಿತಾಂಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿ ಯಿಂದ ನಡೆಸಲಾಗುತ್ತಿರುವ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 16 ಕ್ರೀಡಾಪಟುಗಳಲ್ಲಿ ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ, 11 ಮಂದಿ ಪ್ರಥಮ ದರ್ಜೆಯಲ್ಲಿ ಹಾಗೂ 3 ಕ್ರೀಡಾಪಟುಗಳು ದಿ್ವತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಲ್ಲಿ ಕಾವ್ಯಶ್ರೀ ಶೇ.92 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.







