ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅನೇಕ ಯೋಜನೆಗಳನ್ನು ತಂದಿದ್ದಾರೆ: ಸ್ಮೃತಿ ಇರಾನಿ
ಬೆಳ್ತಂಗಡಿಯಲ್ಲಿ ಕೇಂದ್ರ ಸಚಿವೆ

ಬೆಳ್ತಂಗಡಿ, ಮೇ 7: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಡವರಿಗೆ ಸ್ವಚ್ಛತೆ, ಶೌಚಾಲಯ, ಬಡ ಹೆಣ್ಣುಮಕ್ಕಳಿಗೆ ಅಡುಗೆ ಅನಿಲದ ಸೌಲಭ್ಯ, ಮುದ್ರಾ ಯೋಜನೆ, ರೈತರಿಗೆ ಫಸಲ್ ಬೀಮಾ, ಜನಧನ್ ಮೊದಲಾದ ಅನೇಕ ಯೋಜನೆಗಳನ್ನು ತಂದಿದ್ದಾರೆ. ಇದರಿಂದ ಕೋಟ್ಯಾಂತರ ಜನರಿಗೆ ಪ್ರಯೋಜನವಾಗಿದೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದರು.
ಅವರು ಅಳದಂಗಡಿಯಲ್ಲಿ ಸೋಮವಾರ ನಡೆದ ಬಿಜೆಪಿ ಬೃಹತ್ ಪ್ರಚಾರಸಭೆಯನ್ನುದ್ದೇಶಿಸಿ ಮಾತನಾಡಿದರು. ನಿರಂತರ ಜನತೆಗೆ ಸುಳ್ಳು ಹೇಳಿ ವಂಚಿಸುವುದು ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಜವಹರಲಾಲ್ ನೆಹರು ಬಳಿಕ ಇಂದಿರಾ ಗಾಂಧಿ ನಂತರ ರಾಜೀವ ಗಾಂಧಿ ತದನಂತರ ಈಗ ರಾಹುಲ್ ಗಾಂಧಿ- ಹೀಗೆ ನಾಲ್ಕು ಪೀಳಿಗೆಗಳು ತಮ್ಮಮ ಲೋಕಸಭಾ ಕ್ಷೇತ್ರವಾದ ಅಮೇಠಿಗೆ ರೈಲು ತರುತ್ತೇನೆಂದು ಹೇಳಿಯೇ ಹೇಳಿದ್ದು. ಅಲ್ಲಿನ ನಾಲ್ಕು ಪೀಳಿಗೆಯವರೂ ಅವರ ಭಾಷಣ ಕೇಳಿದ್ದೇ ಬಂತು ಹೊರತಾಗಿ ರೈಲು ಬರಲಿಲ್ಲ. 60 ವರ್ಷದಿಂದ ಸುಳ್ಳುಗಳನ್ನೇ ಬಿತ್ತುತ್ತಿದ್ದಾರೆ ಎಂದರು.
ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ, ತಾಲೂಕಿನ ಮೂಲೆ ಮೂಲೆಗೆ ಹೋಗಿ ನೋಡಿದಾಗ ರಸ್ತೆ ಸೇತುವೆಗಳು ಇನ್ನೂ ಬಾಕಿ ಇವೆ. ಹಳ್ಳಿಗಳ ಮೂಲ ಭೂತ ಸಮಸ್ಯೆಗಳು ಹಾಗೆಯೇ ಇವೆ ಯಾವುದೇ ಪರಿಹಾರ ಕಂಡಿಲ್ಲ. ತಾಲೂಕು ಕಚೇರಿಯ ಜಡತೆಯನ್ನು ಹೋಗಲಾಡಿಸಲು ನಾನು ವಾರಕ್ಕೊಮ್ಮೆ ಅಲ್ಲಿಗೆ ಭೇಟಿ ನೀಡಿ ಬಡವರಿಗಾಗು ತೊಂದರೆಗಳನ್ನು ನಿವಾರಿಸುತ್ತೇನೆ. ನವ ಭಾರತ ಸೃಷ್ಟಿಯೇ ನನ್ನ ಗುರಿ ಎಂದರು.
ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಕುಂಟಾರು ರವೀಶ್ ತಂತ್ರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇರಾನಿ ಅವರ ಹಿಂದಿ ಭಾಷಣವನ್ನು ಬಂಗಾರಡ್ಕ ವಿಶ್ವೇಶ್ವರ ಭಟ್ ಕನ್ನಡಕ್ಕೆ ಭಾಷಾಂತರಿಸಿದರು. ವೇದಿಕೆಯಲ್ಲಿ ಸಂಪತ್ ಸುವರ್ಣ, ಸದಾಶಿವ, ಧನಲಕ್ಷ್ಮೀ, ಸುಧೀರ್ ಸುವರ್ಣ, ಶಶಿಧರ ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು. ಮೋಹನದಾಸ್ ಅಳದಂಗಡಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಸ್ವಾಗತಿಸಿದರು.







