ಕೆಜೆ ಜಾರ್ಜ್ ಮಗನ ವಿರುದ್ಧ ಕಿಡಿಗೇಡಿಗಳಿಂದ ಅಪಪ್ರಚಾರ
ಸತ್ತ ಚಿರತೆ ಹೊತ್ತು ನಿಂತ ರಾಣಾ ಜಾರ್ಜ್‌ರ ಎಡಿಟ್ ಮಾಡಿದ ಫೋಟೊ ವೈರಲ್

ಚಿಕ್ಕಮಗಳೂರು, ಮೇ 7: ಸಚಿವ ಕೆಜೆ ಜಾರ್ಜ್ ಅವರ ಮಗ ರಾಣಾಜಾರ್ಜ್ ಮತ್ತು ಅವರ ಸ್ನೇಹಿತರು ಚಿರತೆಯೊಂದನ್ನು ಬೇಟೆಯಾಡಿ ಹೆಗಲ ಮೇಲೆ ಹೊತ್ತು ಕೊಂಡಿರುವಂತೆ ಎಡಿಟ್ ಮಾಡಲಾಗಿರುವ ಫೋಟೊವೊಂದು ಸದ್ಯ ಸಾಮಾಜಿಕ ಜಾಲತಾಗಳಲ್ಲಿ ವೈರಲ್ ಆಗಿದೆ.
ರಾಣಾ ಜಾರ್ಜ್ ಅವರು ಸತ್ತ ಚಿರತೆಯನ್ನು ಹೆಗಲ ಮೇಲೆ ಹೊತ್ತು ನಿಂತಿರುವ ಪೋಟೊ, ರಾಣಾ ಕೈಯ್ಯಲ್ಲಿ ಆಧುನಿಕ ಬಂದೂಕು ಹಿಡಿದಿರುವ ಪೋಟೊ ಹಾಗೂ ರಾಣಾ ಅವರು ಕೊಡಗು ಜಿಲ್ಲಾ ವೈಲ್ಡ್‌ಲೈಫ್ ವಾರ್ಡನ್ ತ್ಯಾಗ್ ಉತ್ತಪ್ಪ, ಚಿಕ್ಕಮಗಳೂರು ಜಿಲ್ಲಾ ವೈಲ್ಡ್ ಲೈಫ್ ವಾರ್ಡನ್ ಸತೀಶ್‌ಗೌಡ ಎಂಬವರೊಂದಿಗೆ ನಿಂತಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
ಈ ಮೂರು ಫೋಟೊಗಳ ಪೈಕಿ ರಾಣಾ ಅವರು ಚಿರತೆ ಹೊತ್ತು ನಿಂತಿರುವ ಫೋಟೊವನ್ನು ಎಡಿಟ್ ಮಾಡಲಾಗಿದ್ದು, ರಾಣಾ ಅವರ ತಲೆಭಾಗವನ್ನು ಚಿರತೆ ಹೊತ್ತು ನೀತಿರುವ ಅನಾಮಿಕ ವ್ಯಕ್ತಿಯ ಫೋಟೊಗೆ ಎಡಿಟ್ ಮಾಡಲಾಗಿದೆ. ಉಳಿದ ಎರಡು ಫೋಟೊಗಳು ಅಸಲಿ ಎಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೇ, ಸೋಮವಾರ ಸಂಜೆ ಸಂಜಯ್ ಕುಮಾರ್ ಎಂಬಾತ ಫೋಟೊಗಳ ಜೊತೆಗೆ ಒಂದು ಪತ್ರವನ್ನು ಪತ್ರಕರ್ತರೊಬ್ಬರಿಗೆ ತಲುಪಿಸಿದ್ದು, ಭದ್ರಾ ಅಭಯಾರಣ್ಯದ ಪ್ರದೇಶಕ್ಕೆ ಹೊಂದಿಕೊಂಡಿರುವ 400 ಎಕರೆ ಕಾಫಿ ತೋಟವನ್ನು ಇತ್ತೀಚೆಗೆ ಖರೀದಿಸಿದ್ದಾರೆ ಎಂದು ದೂರಲಾಗಿದೆ.
ಕೆ.ಜೆ. ಜಾರ್ಜ್ ಮತ್ತು ಮುಖ್ಯಮಂತ್ರಿಯವರ ಪ್ರಭಾವ ಬಳಸಿಕೊಂಡು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿರುವ ರಾಣಾ, ಇತ್ತೀಚೆಗೆ ಮುಖ್ಯಮಂತ್ರಿಗಳೇ ಖುದ್ದು ರಾಣಾಜಾರ್ಜ್ ಮತ್ತು ಅವರ ಸ್ನೇಹಿತರಿಗೆ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಖಾಸಗಿ ವಾಹನದ ಮೂಲಕ ತಿರುಗಾಡಲು ಅನುಮತಿ ಕೊಡಿಸಿದ್ದಾರೆ ಎಂದು ದೂರಲಾಗಿದೆ.
ವಿದೇಶಿ ನಿರ್ಮಿತ ಸುಸಜ್ಜಿತ ಬಂದೂಕುಗಳನ್ನು ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ತೆಗೆದುಕೊಂಡು ಹೋಗುತ್ತಾರೆ. ಇವರನ್ನು ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಇವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅರಣ್ಯ ಅಧಿಕಾರಿಗಳು, ಅರಣ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಹೆಚ್ಚಿನ ತನಿಖೆ ಮಾಡಿ ಸತ್ಯಾಸತ್ಯತೆ ಹೊರತೆಗೆಯಬೇಕಿದೆ. ವನ್ಯಜೀವಿ ಬೇಟೆಯಾಡಿದ ಇವರನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಇಂತಿ ತಮ್ಮ ವಿಶ್ವಾಸಿಗಳು, ಸ್ಥಳೀಯರು, ಹೆಸರು ಹೇಳಲು ಇಚ್ಚಿಸದ ಅರಣ್ಯ ಸಿಬ್ಬಂದಿ ಪರವಾಗಿ ಸಂಜಯ್ ಕುಮಾರ್ ಎಂದು ಸಹಿ ಹಾಕಿ ಅರಣ್ಯಾಧಿಕಾರಿಗಳಿಗೆ ಬರೆದಿರುವ ಅರ್ಜಿ ಮಾಧ್ಯಮ ಪ್ರತಿನಿಧಿಗಳಿಗೆ ತಲುಪಿಸಲಾಗಿದೆ.
ಮಾಧ್ಯಮದವರಿಗೆ ಕಳುಹಿಸಲಾದ ದೂರಿನ ಪತ್ರದಲ್ಲಿ ಸಂಜಯಕುಮಾರ್ ಎಂದು ಬರೆಯಲಾಗಿದೆ. ಆದರೆ ಅವರ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಸಂದರ್ಭದಲ್ಲೇ ಹರಿಯಬಿಡುವ ಮೂಲಕ ಕಿಡಿಗೇಡಿಗಳು ರಾಜಕೀಯವಾಗಿ ಕೆ.ಜೆ. ಜಾರ್ಜ್ ಅವರ ತೇಜೋವಧೆಗೆ ಇಳಿದಿದ್ದಾರೆ ಎಂಬ ಮಾತುಗಳು ಚಿಕ್ಕಮಗಳೂರಿನಾದ್ಯಂತ ಕೇಳಿ ಬರುತ್ತಿವೆ.
ಈ ಸಂಬಂಧ ಅರಣ್ಯಾಧಿಕಾರಿಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ನಾಗರಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಭದ್ರಾ ಅಭ್ಯಯಾರಣ್ಯದ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಇಂತಹ ಯಾವುದೇ ದೂರುಗಳು ಅರಣ್ಯ ಇಲಾಖೆಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.







