ಕಾಸರಗೋಡು: ರಸ್ತೆ ಅಪಘಾತಕ್ಕೆ ಅರಬಿಕ್ ಶಿಕ್ಷಕ ಬಲಿ

ಕಾಸರಗೋಡು, ಮೇ 8: ಬೈಕ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನಾಗಿದ್ದ ಅರಬಿಕ್ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ಇಂದು ಮುಂಜಾನೆ ನಡೆದಿದೆ.
ಮೃತಪಟ್ಟವರನ್ನು ಅಣಂಗೂರು ಚಾಲ ನಿವಾಸಿ ಮುಫೀದ್ ಹುದವಿ(25) ಎಂದು ಗುರುತಿಸಲಾಗಿದೆ . ಸಹಸವಾರ ಮುಫೀದ್‌ರ ಸಹೋದರ ಇರ್ಷಾದ್(23) ಗಾಯಗೊಂಡಿದ್ದಾರೆ ಮುಫೀದ್ ಬೆದಿರ ಪಿ.ಟಿ.ಎಂ.ಎಚ್.ಎಸ್. ಶಾಲೆಯಲ್ಲಿ ಅರಬಿಕ್ ಶಿಕ್ಷಕರಾಗಿದ್ದರು.
ಮುಫೀದ್ ತನ್ನ ಸಹೋದರ ಇರ್ಷಾದ್ ಜೊತೆ ತಳಂಗರೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇವರಿದ್ದ ಬೈಕ್ ತಳಂಗರೆ ಕ್ಲಾಕ್ ಟವರ್ ಬಳಿ ತಲುಪಿದಾಗ ಕಾರು ಢಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮುಫೀದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





