ಪ್ರಧಾನಿ ಮೋದಿ ವಿರುದ್ಧ ಸಚಿವ ಎಚ್.ಕೆ.ಪಾಟೀಲರಿಂದ ಚುನಾವಣಾ ಆಯೋಗಕ್ಕೆ ದೂರು

ಗದಗ, ಮೇ 8: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾರರ ಮೇಲೆ ಪ್ರಭಾವ ಬೀರಲು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಮತ್ತು ಕಪೋಲಕಲ್ಪಿತ ವಿಚಾರಗಳನ್ನು ಹೇಳಿ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ಸಂವಿಧಾನದ 324ನೇ ಅನುಚ್ಛೇದದ ಅನ್ವಯ ಭಾರತೀಯ ಚುನಾವಣಾ ಆಯೋಗವೂ ಜನತಾ ಪ್ರಾತಿನಿಧ್ಯ ಕಾಯ್ದೆ ಕಲಂ 123ರಡಿ ಚುನಾವಣಾ ದುರ್ವವ್ಯವಹಾರಗಳಿಗಾಗಿ ಪ್ರಧಾನಿಗೆ ಛೀಮಾರಿ ಹಾಕಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಎಚ್.ಕೆ.ಪಾಟೀಲ ಇಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮೂರು ಪುಟಗಳ ಅವರ ದೂರಿನಲ್ಲಿ ''ಮಹದಾಯಿ ಯೋಜನೆ ಕುರಿತಂತೆ ಕಾಂಗ್ರೆಸ್ ಪಕ್ಷವು ಈ ವಿವಾವದನ್ನು ನ್ಯಾಯಾಧೀಕರಣಕ್ಕೆ ಕೊಂಡೊಯ್ದು ಗೊಂದಲ ಸೃಷ್ಟಿ ಮಾಡಿದೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಮಾತುಕತೆ ಮೂಲಕ ಇತ್ಯರ್ಥಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮೇ 5ರಂದು ಗದಗದಲ್ಲಿ ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ. ಆದರೆ, ಈ ವಿವಾದಕ್ಕೆ ಸಂಬಂಧಿಸಿ 2010ರ ಅಕ್ಟೋಬರ್ 26ರಂದು ಅಂದು ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಂತಾರಾಜ್ಯ ಜಲವಿವಾದ ಕಾಯ್ದೆ ಕಲಂ 3ರನ್ವಯ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಿ ನ್ಯಾಯಾಧೀಕರಣ ರಚನೆಗೆ ಕೋರಿತ್ತು. ಪ್ರಧಾನಿ ನರೇಂದ್ರ ಮೋದಿ ಸತ್ಯವನ್ನು ಮರೆಮಾಚಿ ಕೇವಲ ಸುಳ್ಳನ್ನು ಹೇಳುವ ಮೂಲಕ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಚುನಾವಣಾ ದುರ್ವವ್ಯವಹಾರ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.







